ಬೆಳ್ಳಾರೆ: ಮನೆ ನೆಲಸಮ ಆರೋಪ

ಮಂಗಳೂರು, ಸೆ.21: ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಎಂಬಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧವೆಯ ಮನೆಯನ್ನು ಸರಕಾರಿ ಅಧಿಕಾರಿಗಳೇ ಕೆಡವಿದ ಬಗ್ಗೆ ಆರೋಪಗಳು ಕೇಳಿ ಬಂದಿದೆ.
ಈ ವಿಧವೆಯು ತನ್ನ ಮಗನೊಂದಿಗೆ ಹಲವು ಸಮಯದಿಂದ ಈ ಮನೆಯಲ್ಲಿ ವಾಸಿಸುತ್ತಿದ್ದರು. ಅದರಂತೆ 2016ರಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಮಧ್ಯೆ ಗುರುವಾರ ಹಕ್ಕುಪತ್ರ ನೀಡುವುದಾಗಿ ಭರವಸೆ ಕೊಟ್ಟಿದ ಆಡಳಿತ ವರ್ಗವು ಯಾವುದೇ ಮುನ್ಸೂಚನೆ ನೀಡದೆ ಬುಧವಾರ ಅಕ್ರಮವಾಗಿ ಒಬ್ಬಂಟಿ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಮನೆಯನ್ನು ಕೆಡವಿದ್ದಾರೆ ಎನ್ನಲಾಗಿದೆ.
ಖಂಡನೆ: ಅಧಿಕಾರಿ ವರ್ಗದ ಈ ಕೃತ್ಯವನ್ನು ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮನೆ ನೆಲಸಮ ಪ್ರಕ್ರಿಯೆಯಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಹಾಗಾಗಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ದ.ಕ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ವಿಧವೆಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಡಬ್ಲುಪಿಐ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಒತ್ತಾಯಿಸಿದ್ದಾರೆ.







