ಅ.15ರ ವೇಳೆಗೆ ರೈತರಿಗೆ ಋಣಮುಕ್ತ ಪತ್ರ: ಸಚಿವ ಬಂಡೆಪ್ಪ ಕಾಶೆಂಪೂರ್

ಬೆಂಗಳೂರು, ಸೆ. 24: ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಪಡೆದಿದ್ದ ಕೃಷಿ ಸಾಲಮನ್ನಾ ಮಾಡಿದ್ದು, ಅಕ್ಟೋಬರ್ 15 ರ ವೇಳೆಗೆ ರೈತರಿಗೆ ಋಣಮುಕ್ತ ಪತ್ರವನ್ನು ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಮನ್ನಾದ ಲಾಭವನ್ನು ರಾಜ್ಯದ 22 ಲಕ್ಷಕ್ಕೂ ಅಧಿಕ ರೈತರು ಪಡೆಯಲಿದ್ದು, ಕೇವಲ ಒಂದೂವರೆ ವರ್ಷದಲ್ಲಿ ರೈತರ 17 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು ದೇಶದ ಇತಿಹಾಸದಲ್ಲೆ ಇದೆ ಮೊದಲು ಎಂದು ಬಣ್ಣಿಸಿದರು.
ಠೇವಣಿ ಇಟ್ಟಿರುವ ರೈತರ ಸಾಲವೂ ಮನ್ನಾ: ಸಹಕಾರಿ ಬ್ಯಾಂಕುಗಳಲ್ಲಿ 10 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೂ ಎಷ್ಟೇ ಮೊತ್ತದ ಠೇವಣಿ ಇಟ್ಟಿದ್ದರೂ, ಆ ರೈತರ ಸಾಲವೂ ಮನ್ನಾ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಸ್ಪಷ್ಟಣೆ ನೀಡಿದರು.
ಅ.5ರ ಒಳಗೆ ಸಹಕಾರಿ ಬ್ಯಾಂಕುಗಳಿಂದ ಸಾಲಗಾರರ ರಸೀದಿ ಬರಲಿದ್ದು, ಆ ಬಳಿಕ ಅ.15 ರ ಅಥವಾ ದಸರಾ ಹಬ್ಬದ ವೇಳೆಗೆ ರೈತರ ಸಾಲದ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದ ಅವರು, ಮೊದಲ ಹಂತದಲ್ಲಿ 9,448 ಕೊಟಿ ರೂ.ಚಾಲ್ತಿ ಸಾಲಮನ್ನಾಕ್ಕೆ ತೀರ್ಮಾನ ಮಾಡಲಾಗಿತ್ತು. ಆ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ 2ಲಕ್ಷ ರೂ.ವರೆಗಿನ ಸುಸ್ತಿ ಸಾಲಮನ್ನಾಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರ ಸಹಕಾರಿ ಸಂಸ್ಥೆಗಳ 8,165 ಕೋಟಿ ರೂ.ಸಾಲಮನ್ನಾ ಮಾಡಿದ್ದು, ಆ ಮೊತ್ತದ 2.5 ಸಾವಿರ ಕೋಟಿ ರೂ.ಗಳನ್ನು ನಮ್ಮ ಸರಕಾರ ಮರುಪಾವತಿ ಮಾಡಿದೆ. ಅಲ್ಲದೆ, ಇತ್ತೀಚೆಗೆ 1,495 ಕೋಟಿ ರೂ. ಪಾವತಿ ಮಾಡಲಾಗಿದೆ. 2019ರ ಜುಲೈ ವೇಳೆಗೆ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲಮನ್ನಾ ಆಗಲಿದೆ ಎಂದರು.
15 ಲಕ್ಷ ರೈತರಿಗೆ ಹೊಸದಾಗಿ ಸಾಲ: ಸಾಲಮನ್ನಾದಿಂದ ರಾಜ್ಯದ 22ಲಕ್ಷ ರೈತರಿಗೆ ಅನುಕೂಲವಾಗಲಿದೆ. ಅನಂತರ ಇನ್ನೂ 15 ಲಕ್ಷ ಮಂದಿ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಹೊಸದಾಗಿ ಸಾಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದು, ನಬಾರ್ಡ್ ಮೂಲಕ ಹೆಚ್ಚಿನ ನೆರವು ಕೋರಲಾಗಿದೆ ಎಂದರು.
ರೈತರ ಉಳಿತಾಯ ಖಾತೆಗೆ ಸಾಲಮನ್ನಾ ಹಣ ಜಮಾ ಮಾಡಲಾಗುತ್ತದೆ. ಬ್ಯಾಂಕುಗಳು ಈ ಸಾಲಮನ್ನಾದ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಬೇಕು ಎಂದ ಅವರು, ವೇತನದಾರರು, ಪಿಂಚಣಿದಾರರು ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣೆ ಪತ್ರ ಪಡೆದು ಸಾಲಮನ್ನಾ ಅನುಕೂಲ ಕಲ್ಪಿಸಲಾಗುವುದು ಎಂದರು.
ಮಂಡ್ಯದಲ್ಲಿ ಇತ್ತೀಚೆಗೆ ರೈತ ಕುಟುಂಬ ಆತ್ಮಹತ್ಯೆ ಬಗ್ಗೆ ವರದಿ ನೀಡಲು ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲೇವಾದೇವಿಗಾರರ ಒತ್ತಡ, ಕಿರುಕುಳ ತಡೆಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧದ ಕಾಯ್ದೆ ಶೀಘ್ರದಲ್ಲೆ ಜಾರಿಗೆ ಬರಲಿದೆ. ಲೇವಾದೇವಿಗಾರರು ಕಿರುಕುಳ ನೀಡಿದರೆ ಕೂಡಲೇ ದೂರು ನೀಡಬೇಕು. ರೈತರು ದುಡುಕಿನ ನಿರ್ಧಾರ ಕೈಗೊಳ್ಳಬಾರದು, ಸರಕಾರ ನಿಮ್ಮೊಂದಿಗಿದೆ.
-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ







