ಚಿಕ್ಕಮಗಳೂರು ತಾ.ಪಂ. ಕೆಡಿಪಿ ಸಭೆ: ತಾಲೂಕಿನ ಪ್ರತೀ ಗ್ರಾಮಠಾಣಾ ಜಾಗ ಗುರುತಿಗೆ ತಾಪಂ ಅಧ್ಯಕ್ಷ ತಾಕೀತು
ಚಿಕ್ಕಮಗಳೂರು,ಸೆ.24: ತಾಲೂಕಿನ ಪ್ರತಿ ಗ್ರಾಮಠಾಣಾ ಜಾಗವನ್ನು ಶೀಘ್ರವೇ ಗುರುತಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಈ ಕಾರ್ಯವನ್ನು ಕಾಟಾಚಾರಕ್ಕೆ ಮಾಡಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ನೆಟ್ಟನಕೆರೆ ಜಯಣ್ಣ ಎಚ್ಚರಿಸಿದ್ದಾರೆ.
ಸೋಮವಾರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಠಾಣಾ ಜಾಗವನ್ನು ಗುರುತಿಸುವಂತೆ ಕಳೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೀಘ್ರವೇ ಜಾಗ ಗುರುತಿಸಬೇಕು. ಜಾಗ ಗುರುತಿಸುವ ಕಾರ್ಯ ಕಾಟಚಾರಕ್ಕೆ ನಡೆಸದೇ ಸಮರ್ಪಕವಾಗಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾತನಾಡಿ, ಸರಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಫಲನುಭವಿಗಳಿಗೆ ತಲುಪಿಸುವ ಕಾರ್ಯ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಾಡುತ್ತಿದೆ ಎಂದರು.
ಈ ವೇಳೆ ತಾ.ಪಂ. ಅಧ್ಯಕ್ಷ ಜಯಣ್ಣ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಶಾಸಕ ಸಿ.ಟಿ.ರವಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆ ನಡೆಯಲಿದೆ. ಸಭೆಗೆ ಸಮಗ್ರ ವರದಿ ಸಿದ್ದಪಡಿಸುವಂತೆ ತಾಕೀತು ಮಾಡಿದರು. ತ್ರೈಮಾಸಿಕ ಸಭೆಗೆ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕು ಯಾವುದೇ ಸಬೂಬು ಹೇಳಿ ಸಭೆಗೆ ಗೈರಾಗದಂತೆ ತಿಳಿಸಿದರು.
ಪಶುಪಾಲನ ಇಲಾಖೆ ಅಧಿಕಾರಿ ಸಿ.ರಮೇಶ್ ಮಾತನಾಡಿ, ಪಶುಪಾಲನ ಇಲಾಖೆಯ ಕಾರ್ಯಕ್ರಮಗಳನ್ನು ಸಂಪೂರ್ಣಗೊಳಿಸಲಾಗಿದೆ. ಅಕ್ಟೋಬರ್ ತಿಂಗಳಿಂದ ನಡೆಯುವ ಕಾಲುಬಾಯಿ ರೋಗ ಲಸಿಕ ಕಾರ್ಯಕ್ರಮಕ್ಕೆ ಇಲಾಖೆ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ. ಚಿಕ್ಕಗಳೂರು ತಾಲೂಕು ವ್ಯಾಪ್ತಿಯಲ್ಲಿ ಜಾನುವಾರು ಮೇವಿಗೆ ಕೊರತೆಯಿಲ್ಲ, ಲಖ್ಯಾ ಹೋಬಳಿ ಕಳಾಸಪುರ ಪಶುವೈದ್ಯಕೀಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ ಎಂದು ಸಭೆಗೆ ತಿಳಿಸಿದರು.
ತಾ.ಪಂ. ಅಧ್ಯಕ್ಷ ಜಯಣ್ಣ ಮಾತನಾಡಿ, ಜಿ.ಪಂ. ಸಭಾಂಗಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇವಿನ ಕೊರತೆ ವಿಷಯದ ಕುರಿತು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳು ಮೇವಿನ ಕೊರತೆ ಇದೆ ಎನ್ನುತ್ತಾರೆ. ಅಧಿಕಾರಿಗಳು ಕೊರತೆ ಇಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಮತ್ತೊಮ್ಮೆ ಸರಿಯಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಸಹಕಾರಿ ಸಂಘ ಇಲಾಖೆಯ ಅಧಿಕಾರಿ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೈತರ 50 ಸಾವಿರ ಸಾಲಮನ್ನಾ ಹಣವೂ ಬ್ಯಾಂಕ್‍ಗಳಿಗೆ ಬಂದಿದ್ದು, ಖುಣಮುಕ್ತ ಪತ್ರಗಳು ಬಂದಿವೆ, ಇದನ್ನು ಸದ್ಯದಲ್ಲಿಯೇ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು. 50 ಸಾವಿರ ಸಾಲಮನ್ನಾ ಫಲನುಭವಿಗಳು ಸಾಲಕ್ಕೆ ಅರ್ಜಿ ನೀಡದವರಿಗೆ ಶೀಘ್ರದಲ್ಲಿಯೇ ಹೊಸ ಸಾಲ ನೀಡುವುದಾಗಿ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಸರಿಯಾಗಿ ಸಲ್ಲುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಜಯಣ್ಣ, ಇಲಾಖೆ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಮಾಹಿತಿಯೇ ಇಲ್ಲ, ಸರ್ಕಾರಿ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದ ಅವರು, ಮಾದ್ಯಮಗಳ ಮೂಲಕ ಮತ್ತು ಗ್ರಾಮ ಪಂಚಾಯತ್ ಮೂಲಕ ಹೆಚ್ಚಿನ ಪ್ರಚಾರ ಕಾರ್ಯ ನಡೆಸುವಂತೆ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಪವಿತ್ರವನದ ಕೆಸಲವನ್ನು ಶೀಘ್ರವೇ ಮುಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ, ಪವಿತ್ರವನ ಕಾಮಗಾರಿ ಸಂಪೂರ್ಣ ಮುಗಿದಿದೆ. ಜನಪ್ರತಿನಿಧಿಗಳ ದಿನಾಂಕ ನಿಗದಿಯಾಗದ ಕಾರಣದಿಂದ ಉದ್ಘಾಟನೆಗೆ ಹಿನ್ನೆಡೆಯಾಗಿದೆ ಎಂದರು. ತಾ.ಪಂ. ಅಧ್ಯಕ್ಷ ಜಯಣ್ಣ ಮಾತನಾಡಿ ಮುಂದಿನ ತಿಂಗಳು ನಡೆಯುವ ತ್ರೈಮಾಸಿಕ ಸಭೆಗೆ ಅರಣ್ಯ ಇಲಾಖೆಯಿಂದ ಎಷ್ಟು ನಡುತೋಪು ನಿರ್ಮಾಣ ಮಾಡಲಾಗಿದೆ ಎಂಬುವುದರ ಸವಿವರ ವರದಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಕುಡಿಯುವ ನೀರು ಇಲಾಖೆ ಅಧಿಕಾರಿ ಮಾತನಾಡಿ, ಇಲಾಖೆಯ 122 ಕಾಮಗಾರಿಗಳಲ್ಲಿ 58 ಕಾಮಗಾರಿ ಮುಕ್ತಾಯವಾಗಿದೆ. ಇಲಾಖೆ ಆಯುಕ್ತರು ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ನಿರ್ದೇಶನ ನೀಡಿದ್ದಾರೆ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಾಲೂಕಿನ 8 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೊಸ ಯೂನಿಟ್ ಅಳವಡಿಸಲಾಗಿದೆ ಎಂದರು.
ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಟ್ಯಾಂಕರ್ ಮಾಲಕರಿಗೆ 40 ಲಕ್ಷ ರೂ. ಮಾತ್ರ ಬಾಕಿ ಇದೆ. ಬೇರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಚಿಕ್ಕಮಗಳೂರು ತಾಲೂಕಿನಲ್ಲಿ ಭಾಗಶಃ ನೀಡಲಾಗಿದೆ ಎಂದರು. ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗೆ ಡ್ಯಾಮೇಜ್ ಮಾಡಿ ಕೆಲ ಕಿಡಿಗೇಡಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಗಾಣದಾಳಿನಲ್ಲಿ ಕೊರೆದ ಕೊಳವೆ ಬಾವಿ ಸಮೀಪದಲ್ಲಿಯೇ ಖಾಸಗಿ ವ್ಯಕ್ತಿಯೊಬ್ಬರು ಆಳವಾದ ಕೊಳವೆ ಬಾವಿ ಕೊರೆಸಿದ್ದರಿಂದ ನೀರಿನ ಸಮಸ್ಯೆ ಆಗುತ್ತಿದೆ. ಸಾರ್ವಜನಿಕ ಕುಡಿಯುವ ನೀರಿಗೆ ತೊಂದರೆ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಮೇಶ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾ ನಟೇಶ್, ಕಾರ್ಯನಿರ್ವಹಣಾಧಿಕಾರಿ ರೇವಣ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.