ನೋವು ನಿವಾರಕಗಳನ್ನು ತೆಗೆದುಕೊಳ್ಳದೆ ಕ್ಲಸ್ಟರ್ ತಲೆನೋವುಗಳಿಂದ ಪಾರಾಗುವುದು ಹೇಗೆ?
ತಲೆನೋವು ಸಾಮಾನ್ಯ ಕಾಯಿಲೆಯಾಗಿದ್ದು,ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಇದನ್ನು ಅನುಭವಿಸಿರುತ್ತಾರೆ. ಕೆಲವರಿಗಂತೂ ತಲೆನೋವು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಹಲವಾರು ತಲೆನೋವುಗಳು ಏಕಕಾಲದಲ್ಲಿ ವ್ಯಕ್ತಿಯನ್ನು ಕಾಡುತ್ತಿದ್ದರೆ ಅದನ್ನು ಕ್ಲಸ್ಟರ್ ಅಥವಾ ಗೊಂಚಲು ತಲೆನೋವು ಎಂದು ಕರೆಯಲಾಗುತ್ತದೆ. ಈ ತಲೆನೋವುಗಳು ತೀವ್ರ ಸ್ವರೂಪದ್ದಾಗಿದ್ದು,ತಲೆಯ ಒಂದು ಪಾರ್ಶ್ವದಲ್ಲಿ ಅಥವಾ ಕಣ್ಣಿನ ಹಿಂದೆ ಪರಿಣಾಮವನ್ನು ಬೀರುತ್ತದೆ.
ಸಾಮಾನ್ಯವಾಗಿ 20ರಿಂದ 50 ವರ್ಷ ವಯೋಮಾನದವರು ಕ್ಲಸ್ಟರ್ ತಲೆನೋವುಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದ್ದರೂ,ಅದು ಈ ವಯೋಗುಂಪಿನಿಂದ ಹೊರತಾಗಿರುವ ಯಾರನ್ನೂ ಕಾಡಬಹುದು. ಧೂಮ್ರಪಾನ,ಮದ್ಯಪಾನ ಮತ್ತು ಒತ್ತಡ ಈ ವಿಧದ ತಲೆನೋವಿನ ಅಪಾಯವನ್ನು ಹೆಚ್ಚಿಸುವ ಸಾಮಾನ್ಯ ಅಂಶಗಳಾಗಿವೆ.
ಕ್ಲಸ್ಟರ್ ತಲೆನೋವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ,ಈ ತಲೆನೋವು ಉಂಟಾದಾಗ ಮಸ್ತಿಷ್ಕ ನಿಮ್ನಾಂಗವು ಕ್ರಿಯಾಶೀಲಗೊಂಡಿರುತ್ತದೆ ಅಥವಾ ಪ್ರಚೋದಿಸಲ್ಪಟ್ಟಿರುತ್ತದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ.
ಉರಿ,ತೀವ್ರ ನೋವು ಈ ತಲೆನೋವಿನ ವೈಶಿಷ್ಟಗಳಾಗಿವೆ. ಕಣ್ಣುಗುಡ್ಡೆಗಳು ಜೋಲು ಬೀಳುವುದು,ಕಣ್ಣಿನಿಂದ ಅತಿಯಾಗಿ ನೀರು ಬರುವುದು,ಕಣ್ಣಿನ ಪಾಪೆಯು ಸಂಕುಚಿತಗೊಳ್ಳುವುದು,ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗುವುದು,ಮುಖ ಊದಿಕೊಳ್ಳುವುದು ಮತ್ತು ಮೂಗು ಕಟ್ಟಿಕೊಳ್ಳುವುದು ಕ್ಲಸ್ಟರ್ ತಲೆನೋವಿನ ಇತರ ಸಾಮಾನ್ಯಲಕ್ಷಣಗಳಾಗಿವೆ. ಕ್ಲಸ್ಟರ್ ತಲೆನೋವುಗಳು ಅಪಾಯಕಾರಿಯಲ್ಲ ಮತ್ತು ನೋವು ನಿವಾರಕಗಳನ್ನು ಸೇವಿಸದೇ ಕೆಲವು ಮನೆಮದ್ದುಗಳಿಂದಲೇ ಇದರಿಂದ ಪಾರಗಬಹುದು. ಈ ಬಗ್ಗೆ ಮಾಹಿತಿಗಳಿಲ್ಲಿವೆ......
►ಕ್ಯಾಪ್ಸೈಸಿನ್ ನೇಸಲ್ ಸ್ಪ್ರೇ
ಖಾರವಾದ ಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಕ್ಲಸ್ಟರ್ ತಲೆನೋವುಗಳ ತೀಕ್ಷ್ಣತೆಯನ್ನು ತಗ್ಗಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕ್ಯಾಪ್ಸೈಸಿನ್ ನೇಸಲ್ ಸ್ಪ್ರೇ ಟ್ರೈಜೆಮಿನಲ್ ನರವನ್ನು ಸಂವೇದನಾರಹಿತಗೊಳಿಸುತ್ತದೆ ಮತ್ತು ಕ್ಲಸ್ಟರ್ ತಲೆನೋವಿನಲ್ಲಿ ಪಾತ್ರ ಹೊಂದಿರುವ ರಾಸಾಯನಿಕದ ಮಟ್ಟವನ್ನು ಕಡಿಮೆಗೊಳಿಸುತ್ತದೆ.
►ಮ್ಯಾಗ್ನೀಷಿಯಂ ಸಮೃದ್ಧ ಆಹಾರಗಳು
ವ್ಯಕ್ತಿಗೆ ಆಗಾಗ್ಗೆ ಕ್ಲಸ್ಟರ್ ತಲೆನೋವು ಕಾಡುತ್ತಿದ್ದರೆ ಶರೀರದಲ್ಲಿ ಮ್ಯಾಗ್ನೀಷಿಯಂ ಕೊರತೆಯಿದೆ ಎನ್ನುವುದನ್ನು ಅದು ಸೂಚಿಸುತ್ತದೆ. ಇಂತಹವರು ಬದಾಮ, ಅಂಜೂರ ಮತ್ತು ಅವಕಾಡೊಗಳಂತಹ ಮ್ಯಾಗ್ನೀಷಿಯಂ ಸಮೃದ್ಧ ಆಹಾರಗಳನ್ನು ಸಾಧ್ಯವಿದ್ದಷ್ಟು ಹೆಚ್ಚಿಗೆ ಸೇವಿಸಬೇಕು. ಮ್ಯಾಗ್ನೀಷಿಯಂ ಪೂರಕಗಳನ್ನೂ ಸೇವಿಸಬಹುದಾಗಿದೆ.
►ಮೆಲಾಟೋನಿನ್
ಮೆಲಾಟೋನಿನ್ ಹಾರ್ಮೋನ್ ನಿದ್ರೆಯನ್ನು ಕ್ರಮಬದ್ಧಗೊಳಿಸುತ್ತದೆ. ನಮ್ಮ ಶರೀರದಲ್ಲಿ ಮೆಲಾಟೋನಿನ್ ಮಟ್ಟವು ಕಡಿಮೆಯಾಗಿದ್ದರೆ ಕ್ಲಸ್ಟರ್ ತಲೆನೋವುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಚಿಕಿತ್ಸೆ ನೀಡುವಲ್ಲಿ ಮೆಲಾಟೋನಿನ್ ಪೂರಕಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಪ್ರತಿದಿನ ಮಲಗುವ ಮುನ್ನ ಎರಡು ಚಮಚ ಈ ಪೂರಕಗಳನ್ನು ಸೇವಿಸಬಹುದಾಗಿದೆ. ಆದರೆ ಇದನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.
►ಜಿಂಜಿರ್ ಟೀ
ಶುಂಠಿಯಲ್ಲಿರುವ ಜಿಂಜರಾಲ್ ಎಂಬ ಘಟಕವು ಚಿಕಿತ್ಸಾ ಗುಣಗಳನ್ನು ಹೊಂದಿದೆ. ಈ ರಾಸಾಯನಿಕವು ಶುಂಠಿಯನ್ನು ಅತ್ಯಂತ ಸಮರ್ಥ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕವನ್ನಾಗಿಸಿದೆ ಮತ್ತು ಕ್ಲಸ್ಟರ್ ತಲೆನೋವನ್ನು ಶಮನಗೊಳಿಸುವಲ್ಲಿ ನೆರವಾಗುತ್ತದೆ. ಜಿಂಜಿರ್ ಟೀ ಅನ್ನು ದಿನಕ್ಕೆರಡು ಬಾರಿ ಸೇವಿಸುವುದರಿಂದ ಈ ತಲೆನೋವಿನ ಬಾಧೆಯಿಂದ ಪಾರಾಗಬಹುದು.
►ವಿಟಾಮಿನ್ ಬಿ12
ಈ ವಿಟಾಮಿನ್ ಕ್ಲಸ್ಟರ್ತಲೆನೋವಿನ ತೀವ್ರತೆಯನ್ನು ಮತ್ತು ಆಗಾಗ್ಗೆ ಕಾಣಿಸಿಕೊಳ್ಳುವುದನ್ನು ತಗ್ಗಿಸುತ್ತದೆ. ಬಿ12 ವಿಟಾಮಿನ್ ಕೊರತೆಯು ನರಗಳಿಗೆ ಹಾನಿಯನ್ನುಂಟು ಮಾಡಿ,ಉರಿಯೂತವನ್ನುಂಟು ಮಾಡುತ್ತದೆ ಮತ್ತು ಇದು ಕ್ಲಸ್ಟರ್ ತಲೆನೋವುಗಳಿಗೆ ಕಾರಣವಾಗುತ್ತದೆ. ವಿಟಾಮಿನ್ ಬಿ12 ಸಮೃದ್ಧ ಆಹಾರಗಳನ್ನು ಸೇವಿಸುವ ಮೂಲಕ ಇದನ್ನು ನಿವಾರಿಸಬಹುದು.
►ದೀರ್ಘ ಉಸಿರಾಟದ ವ್ಯಾಯಾಮ
ದೀರ್ಘವಾದ ಉಸಿರಾಟವು ಮಿದುಳಿಗೆ ಹೆಚ್ಚಿನ ಆಮ್ಲಜನಕದ ಪೂರೈಕೆಯಾಗುವಂತೆ ಮಾಡುತ್ತದೆ ಮತ್ತು ಕ್ಲಸ್ಟರ್ ತಲೆನೋವಿನಿಂದ ಶಮನ ಪಡೆಯಲು ನೆರವಾಗುತ್ತದೆ.
►ಎಸೆನ್ಶಿಯಲ್ ಆಯಿಲ್
ಈ ತೈಲಗಳು ಕ್ಲಸ್ಟರ್ ತಲೆನೋವನ್ನು ಶಮನಿಸುತ್ತವೆ. ಇವುಗಳಲ್ಲಿರುವ ಚಿಕಿತ್ಸಾ ಗುಣಗಳು ನರಗಳಿಗೆ ಆರಾಮವನ್ನು ನೀಡುತ್ತವೆ. ವಿಶೇಷವಾಗಿ ಪೆಪ್ಪರ್ಮಿಂಟ್ ಮತ್ತು ಲ್ಯಾವೆಂಡರ್ ಎಸೆನ್ಸಿಯಲ್ ಆಯಿಲ್ಗಳು ಕ್ಲಸ್ಟರ್ ತಲೆನೋವಿನಿಂದ ಮುಕ್ತಿ ಪಡೆಯಲು ನೆರವಾಗುತ್ತವೆ.