ಸೆ.27 ರಂದು ಬೃಹತ್ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ: ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್

ಬೆಂಗಳೂರು, ಸೆ.26: ಮಾದಕ ದ್ರವ್ಯ ವ್ಯಸನದಿಂದ ನಮ್ಮ ಯುವ ಸಮೂಹ ಭಾರಿ ಅಪಾಯವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ವತಿಯಿಂದ ಸೆ.27ರಂದು ಸಂಜೆ 6.30ಕ್ಕೆ ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಬೃಹತ್ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.
ಬುಧವಾರ ‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ನಗರದ ವಿವಿಧ ಭಾಗಗಳಲ್ಲಿ ಮಾದಕ ದ್ರವ್ಯ ಪಿಡುಗಿನ ವಿರುದ್ಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮಾದಕ ದ್ರವ್ಯಗಳನ್ನು ಮಾರಾಟ ಮಾಡುವವರನ್ನು ದಸ್ತಗಿರಿ ಮಾಡಿದ್ದೇವೆ ಎಂದರು.
ನಮ್ಮ ಅಭಿಯಾನಕ್ಕೆ ಎರಡು ತಿಂಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜೊತೆಯಲ್ಲಿ ಕೆಲಸ ಮಾಡಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ನಗರದಲ್ಲಿ ಮಾದಕ ದ್ರವ್ಯ ಕುರಿತು ಜಾಗೃತಿ ಮೂಡಿಸಲು ಕೈಜೋಡಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಬೃಹತ್ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಅಂತರ್‌ರಾಷ್ಟ್ರೀಯ ಕ್ರಿಕೆಟಿಗ, ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅಬ್ದುಲ್ ಅಹದ್ ಮನವಿ ಮಾಡಿದರು.
ವ್ಯಸನದಿಂದ ಆರೋಗ್ಯದ ಕಡೆಗೆ ಎಂಬ ಸಂದೇಶವನ್ನು ನಮ್ಮ ಎಲ್ಲ ಪೊಲೀಸರು ಈ ಸಂದರ್ಭದಲ್ಲಿ ಸಾರಲಿದ್ದಾರೆ. ಫಿನಿಕ್ಸ್ ಮಾರ್ಕೆಟ್ ಸಿಟಿಯವರು ಈ ಕಾರ್ಯಕ್ರಮ ಆಯೋಜಿಸಲು ನಮಗೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿಜೆ ರಶ್ಮಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಕರ್ಷಕ ದೇಹದಾರ್ಢ್ಯ ಪ್ರದರ್ಶನ, ಸಂಗೀತ ರಸಮಂಜರಿ, ಕಳರಿಪಯಟ್ಟು ಸಮರಕಲೆ ಹಾಗು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಬೆಂಗಳೂರು ಪೊಲೀಸರು ನಿರ್ಮಿಸಿರುವ ಕಿರು ವಿಡಿಯೋ ಪ್ರದರ್ಶನ ನಡೆಯಲಿದೆ. ಎಲ್ಲ ಅತಿಥಿಗಳು ಹಾಗು ಸ್ವಯಂಸೇವಕರು ಕಿರು ವ್ಯಾಯಾಮ ಪ್ರದರ್ಶನದ ಮೂಲಕ ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನಿಂದ ಹೋರಾಡುವ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಿದ್ದಾರೆ ಎಂದು ಅಬ್ದುಲ್ ಅಹದ್ ಹೇಳಿದರು.
ಮಾದಕ ವ್ಯಸನದ ಪಿಡುಗನ್ನು ನಿರ್ಮೂಲನೆ ಮಾಡಲು ನಮಗೆ ಬೆಂಬಲವಾಗಿ ಬೆಂಗಳೂರಿನ ಎಲ್ಲ ಜಾಗೃತ ನಾಗರಿಕರು ಈ ಮಾದಕ ವ್ಯಸನ ವಿರೋಧಿ ಅಭಿಯಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದರು.







