ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಶ್ರೀ ವಿರುದ್ಧ ಆರೋಪ ಪಟ್ಟಿ

ಮಂಗಳೂರು, ಸೆ. 26: ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಶ್ರೀ ಸೇರಿ ಮೂವರ ವಿರುದ್ಧ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
2014ರಲ್ಲಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಶ್ರೀ, ಪುತ್ತೂರು ಹವ್ಯಕ ವಲಯ ಅಧ್ಯಕ್ಷ ಶಿವಶಂಕರ ಭಟ್ ವಿರುದ್ಧ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಗಾಯಕಿಯ ಪತಿಯ ಸಹೋದರ ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ, ಬೆದರಿಕೆ ಮತ್ತು ನಿಂದನೆ ಆರೋಪದಡಿ ಸಿಐಡಿ ಡಿವೈಎಸ್ಪಿ ಆರ್.ವಾಸು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಶ್ಯಾಮ್ ಪ್ರಸಾದ್ ಅವರು 2014ರ ಸೆ.1ರಂದು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅತ್ಯಾಚಾರ ಕೇಸ್ ನಲ್ಲಿ ಸ್ವಾಮೀಜಿ ಪರ ನಿಲ್ಲುವಂತೆ ಬೆದರಿಕೆ ಹಾಕಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನ ಬಳಿಕ ಸರ್ಕಾರ ಸಿಐಡಿಗೆ ವಹಿಸಿತ್ತು. ಅಲ್ಲದೇ ಈ ಮೂವರು ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೊ ದಾಖಲೆಯನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.







