ಕೊಡಗಿನಲ್ಲಿ ಮತ್ತೆ ಮಳೆ: ಗುಡುಗಿನ ತೀವ್ರತೆಗೆ ಭೂಮಿ ಕಂಪಿಸಿದ ಅನುಭವ

ಮಡಿಕೇರಿ, ಸೆ.26: ಕಳೆದ ಮೂರು ವಾರಗಳಿಂದ ಕೊಡಗಿನಿಂದ ಕಣ್ಮರೆಯಾಗಿದ್ದ ಮಳೆ ಮತ್ತೆ ಕಾಣಿಸಿಕೊಂಡಿದೆ. ಬುಧವಾರ ಬೆಳಗಿನ ಜಾವ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಗುಡುಗಿನ ತೀವ್ರತೆಗೆ ಭೂಮಿಯೇ ಕಂಪಿಸಿದ ಅನುಭವವಾಗಿದೆ. ನಿರಂತರ ಗುಡುಗು, ಸಿಡಿಲಿಗೆ ಜನ ಭಯಭೀತರಾಗಿದ್ದು, ಮಳೆ ಹೆಚ್ಚಾದರೆ ಮತ್ತೆ ಹಾನಿ ಸಂಭವಿಸಬಹುದೆನ್ನುವ ಆತಂಕ ಎದುರಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 30.52 ಮಿ.ಮೀ. ಮಳೆಯಾಗಿದ್ದು, ಮಡಿಕೇರಿ ತಾಲೂಕಿನಲ್ಲಿ 19.65 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 20.10 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 51.82 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 17, ನಾಪೋಕ್ಲು 31.20, ಸಂಪಾಜೆ 21.20, ಭಾಗಮಂಡಲ 9.20, ವೀರಾಜಪೇಟೆ ಕಸಬಾ 20, ಹುದಿಕೇರಿ 4, ಪೊನ್ನಂಪೇಟೆ 67.60, ಅಮ್ಮತ್ತಿ 28, ಬಾಳೆಲೆ 1, ಸೋಮವಾರಪೇಟೆ ಕಸಬಾ 59, ಶನಿವಾರಸಂತೆ 65.30, ಶಾಂತಳ್ಳಿ 24.60, ಕೊಡ್ಲಿಪೇಟೆ 34.60, ಕುಶಾಲನಗರ 86.40, ಸುಂಟಿಕೊಪ್ಪ 41 ಮಿ.ಮೀ. ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ ಮಳೆ ಪ್ರಮಾಣ 5514.49 ಮಿ.ಮೀ.ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2903.20 ಮಿ.ಮೀ. ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 2918.44 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1662.87 ಮಿ.ಮೀ. ಮಳೆ ಬಿದ್ದಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಇದುವರೆಗೆ 3081.79 ಮಿ.ಮೀ. ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1616.68 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಈ ವರ್ಷ ಸರಾಸರಿ 3838.23 ಮಿ.ಮಿ.ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2060.92 ಮಿ.ಮೀ ಮಳೆಯಾಗಿತ್ತು.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ ಜಲಾಶಯದಲ್ಲಿ 2853.50 ಅಡಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2858 ಅಡಿ ನೀರಿತ್ತು. ಪ್ರಸಕ್ತ ಜಲಾಶಯಕ್ಕೆ 1227 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 1511 ಕ್ಯುಸೆಕ್‍ನಷ್ಟಿತ್ತು. ಜಲಾಶಯದಿಂದ ನಾಲೆಗೆ 1425 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನದಿಗೆ 2500 ಕ್ಯುಸೆಕ್ ಹಾಗೂ ನಾಲೆಗೆ 200 ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು.







