ಜನ್ಮದತ್ತ ರಕ್ತ ಹೆಪ್ಪುಗಟ್ಟುವಿಕೆ ರೋಗದ ಬಗ್ಗೆ ಗೊತ್ತಿದೆಯೇ?
ರಕ್ತ ಹೆಪ್ಪುಗಟ್ಟುವುದು ಒಳ್ಳೆಯದು. ರಕ್ತ ಹೆಪ್ಪುಗಟ್ಟದಿದ್ದರೆ ನಮಗೆ ಸಣ್ಣ ಗಾಯವಾದರೂ ರಕ್ತಸ್ರಾವ ನಿಲ್ಲುವುದಿಲ್ಲ. ಆದರೆ ರಕ್ತ ಹೆಪ್ಪುಗಟ್ಟುವಿಕೆಯು ಹೆಚ್ಚಾದರೂ ಸಮಸ್ಯೆಯೇ. ಜನ್ಮದತ್ತವಾದ ರಕ್ತ ಹೆಪ್ಪುಗಟ್ಟುವಿಕೆ ರೋಗವು ವ್ಯಕ್ತಿಯ ಜೀನವ ಪರ್ಯಂತ ಸಮಸ್ಯೆಗಳನ್ನುಂಟು ಮಾಡಬಲ್ಲುದು. ನಮಗೆ ಗಾಯವಾದಾಗ ರಕ್ತದಲ್ಲಿಯ ಪ್ಲೇಟ್ಲೆಟ್ಗಳು ಮತ್ತು ಪ್ಲಾಸ್ಮಾದಂತಹ ಘಟಕಗಳು ರಕ್ತಸ್ರಾವವನ್ನು ನಿಲ್ಲಿಸಲು ನೆರವಾಗುತ್ತವೆ. ಅವು ರಕ್ತವನ್ನು ದಪ್ಪಗೊಳಿಸುವ ಮೂಲಕ ಅದು ಹೆಪ್ಪುಗಟ್ಟುವಂತೆ ಮಾಡುತ್ತವೆ ಮತ್ತು ಇದರಿಂದಾಗಿ ರಕ್ತಸ್ರಾವವು ತನ್ನಿಂತಾನೇ ನಿಲ್ಲುತ್ತದೆ.
ಆದರೆ ರಕ್ತವು ಅತಿಯಾಗಿ ಹೆಪ್ಪುಗಟ್ಟುತ್ತಿದ್ದರೆ ಅದು ಹೈಪರ್ಕೋಗ್ಯುಲೇಬಲ್ ಎಂಬ ಸ್ಥಿತಿಗೆ ಕಾರಣವಾಗುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ರೋಗವುಂಟಾಗುವಲ್ಲಿ ವಂಶವಾಹಿಗಳ ಪಾತ್ರ ಇರುವುದನ್ನು ಹಲವಾರು ಅಧ್ಯಯನಗಳು ಗುರುತಿಸಿವೆ. ಈ ರೋಗವನ್ನು ಹಲವಾರು ವಿಧಗಳಾಗಿ ವರ್ಗೀಕರಿಸಲಾಗಿದೆ. ಫ್ಯಾಕ್ಟರ್ 5 ಲೀಡೆನ್ ಮತ್ತು ಪ್ರೊಥ್ರೊಂಬಿನ್ ವಂಶವಾಹಿ ವಿಭಜನೆ ಇವು ಅತ್ಯಂತ ಸಾಮಾನ್ಯವಾಗಿರುವ ರಕ್ತ ಹೆಪ್ಪುಗಟ್ಟುವ ರೋಗಗಳಾಗಿವೆ. ಆ್ಯಂಟಿಥ್ರೊಂಬಿನ್ ಹಾಗೂ ಪ್ರೋಟಿನ್ ಎಸ್ ಮತ್ತು ಪ್ರೋಟಿನ್ ಸಿ ಕೊರತೆಗಳು ಅಷ್ಟೊಂದು ಸಾಮಾನ್ಯವಲ್ಲದ ರೋಗಗಳಾಗಿವೆ.
ಪ್ರೊಥ್ರೊಂಬಿನ್ ಜೀನ್ ಮ್ಯುಟೇಷನ್: ಇದು ವಂಶವಾಹಿ ದೋಷದಿಂದ ಉಂಟಾಗುವ ರೋಗವಾಗಿದ್ದು,ಪ್ರೊಥ್ರೊಂಬಿನ್ ಅಥವಾ ಫ್ಯಾಕ್ಟರ್ 2 ಎಂದು ಕರೆಯಲಾಗುವ ರಕ್ತವನ್ನು ಹೆಪ್ಪುಗಟ್ಟಿಸುವ ಪ್ರೋಟಿನ್ನ ಅತಿಯಾದ ಉತ್ಪತ್ತಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಅಭಿಧಮನಿಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಈ ರೋಗವಿರುವ ಮಕ್ಕಳಲ್ಲಿ ಕನಿಷ್ಠ ಒಂದು ವಂಶವಾಹಿ ದೋಷಪೂರ್ಣವಾಗಿರುತ್ತದೆ.
ಗಾಯಗಳಾದಾಗ ರಕ್ತಸ್ರಾವವನ್ನು ನಿಲ್ಲಿಸಲು ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆಗೆ ಪ್ರೊಥ್ರೊಂಬಿನ್ ಅಗತ್ಯವಾಗಿದೆ. ಈ ರೋಗವಿರುವ ಮಕ್ಕಳಲ್ಲಿ ಪ್ರೊಥ್ರೊಂಬಿನ್ ಅತಿಯಾದ ಪ್ರಮಾಣದಲ್ಲಿರುತ್ತದೆ ಮತ್ತು ಅಗತ್ಯಕ್ಕಿಂತ ಹೆಚ್ಚಿ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ವ್ಯಕ್ತಿಯು ಗಂಭೀರ ಕಾಯಿಲೆಗೆ ಗುರಿಯಾಗಿದ್ದರೆ ಆಥವಾ ನಿರ್ಧಾರವಾಗದ ಪ್ರತಿರಕ್ಷಿತ ಕಾಯಿಲೆಯನ್ನು ಹೊಂದಿದ್ದರೆ ರಕ್ತವು ಹೆಚ್ಚಿನ ಪ್ರಮಾಣದಲ್ಲಿ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ಇಂತಹ ವ್ಯಕ್ತಿ ಮಹಿಳೆಯಾಗಿದ್ದಲ್ಲಿ ಮತ್ತು ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುತ್ತಿದ್ದಲ್ಲಿ ಈ ಅಪಾಯವು ಇನ್ನಷ್ಟು ಹೆಚ್ಚುತ್ತದೆ.
ಆ್ಯಂಟಿಥ್ರೊಂಬಿನ್ ಡಿಫಿಷಿಯನ್ಸಿ: ನೈಸರ್ಗಿಕ ಪ್ರೋಟಿನ್ ಆಗಿರುವ ಆ್ಯಂಟಿಥ್ರೊಂಬಿನ್ ರಕ್ತ ಹೆಪ್ಪುಹಟ್ಟುವುದನ್ನು ತಡೆಯಲು ನೆರವಾಗುತ್ತದೆ. ಈ ಪ್ರೋಟಿನ್ನ ಕೊರತೆಯಿದ್ದರೆ ರಕ್ತವು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕರಣೆಗಟ್ಟುತ್ತದೆ
ವ್ಯಕ್ತಿಯು ಈ ರೋಗಕ್ಕೆ ಗುರಿಯಾಗುವಿಕೆಯು ಆತನಲ್ಲಿ ಈ ನೈಸರ್ಗಿಕ ಪ್ರೋಟಿನ್ ಎಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಮಕ್ಕಳಲ್ಲಿ ಈ ರೋಗವು ಪತ್ತೆಯಾದರೆ ಬ್ಲಡ್ ಥಿನರ್ಗಳು ಅಥವಾ ಆ್ಯಂಟಿಥ್ರೊಂಬಿನ್ ಒಳಗೊಂಡಿರುವ ಫ್ಯಾಕ್ಟರ್ಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ರೋಗವು ಅಪರೂಪವಾಗಿದ್ದು,ಶೇ.1ಕ್ಕೂ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುತ್ತದೆ.
ಫ್ಯಾಕ್ಟರ್ 5 ಲೀಡೆನ್: ಇದು ಅತ್ಯಂತ ಸಾಮಾನ್ಯ ರಕ್ತ ಹೆಪ್ಪುಗಟ್ಟುವ ರೋಗವಾಗಿದ್ದು,ಈ ಸ್ಥಿತಿಯನ್ನು ಹೊಂದಿರುವ ಜನರು ಒಂದು ಸಹಜ ವಂಶವಾಹಿ ಮತ್ತು ಒಂದು ಪೀಡಿತ ವಂಶವಾಹಿಯನ್ನು ಹೊಂದಿರುತ್ತಾರೆ. ಮಕ್ಕಳಲ್ಲಿ ಅಪರೂಪಕ್ಕೆ ಎರಡು ವಂಶವಾಹಿಗಳು ಪೀಡಿತವಾಗಿರುತ್ತವೆ.
ಫ್ಯಾಕ್ಟರ್ 5 ರಕ್ತ ಹೆಪ್ಪುಗಟ್ಟುವಿಕೆಗೆ ನೆರವಾಗುವ ಪ್ರೋಟಿನ್ ಆಗಿದೆ. ಮಗುವಿನಲ್ಲಿ ಒಂದು ವಂಶವಾಹಿ ಪೀಡಿತವಾಗಿದ್ದರೆ ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣ ಹತ್ತು ಪಟ್ಟು ಹೆಚ್ಚುವ ಸಾಧ್ಯತೆಯಿರುತ್ತದೆ. ಆದರೆ ಸಾಮಾನ್ಯವಾಗಿ ಈ ರೋಗವಿರುವ ಮಕ್ಕಳಲ್ಲಿ ಬಾಲ್ಯದಲ್ಲಿ ಅಥವಾ ವಯಸ್ಕರಾದಾಗಲೂ ರಕ್ತ ಅತಿಯಾದ ಪ್ರಮಾಣದಲ್ಲಿ ಹೆಪ್ಪುಗಟ್ಟುವುದಿಲ್ಲ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಯಾವುದಾದರೂ ಗಂಭೀರ ಕಾಯಿಲೆ ಅಥವಾ ಪ್ರತಿರಕ್ಷಿತ ಅಂದರೆ ಶರೀರದ ನಿರೋಧಕ ಶಕ್ತಿಯು ಅಂಗಾಂಶಗಳ ಮೇಲೆ ದಾಳಿ ನಡೆಸಿ ಉಂಟುಮಾಡುವ ರೋಗಕ್ಕೆ ಗುರಿಯಾದರೆ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚುತ್ತದೆ.
ಪ್ರೋಟಿನ್ ಸಿ ಮತ್ತು ಎಸ್ ಕೊರತೆ: ಇವು ಕೇವಲ ಶೇ.1ಕ್ಕೂ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುವ ರೋಗಗಳಾಗಿವೆ. ಈ ರೋಗವಿದ್ದರೆ ಸಾಮಾನ್ಯವಾಗಿ ವ್ಯಕ್ತಿ ವಯಸ್ಕನಾದಾಗ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ವ್ಯಕ್ತಿಯು ಜೀವಮಾನವಿಡೀ ರಕ್ತವು ಹೆಪ್ಪುಗಟ್ಟುವ ಅಪಾಯವನ್ನು ಎದುರಿಸುತ್ತಿರುತ್ತಾನೆ. ಶರೀರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಪ್ರೋಟಿನ್ ಸಿ ಮತ್ತು ಎಸ್ ಜೊತೆಯಾಗಿ ಕಾರ್ಯಾಚರಿಸುತ್ತಿರುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಪ್ರೋಟಿನ್ನ ಕೊರತೆಯಾದರೂ ಅದು ರಕ್ತ ಹೆಪ್ಪುಗಟ್ಟುವ ರೋಗಕ್ಕೆ ಕಾರಣವಾಗುತ್ತದೆ. ಪ್ರೋಟಿನ್ ಸಿ ಅಥವಾ ಎಸ್ ಕೊರತೆ ಜನ್ಮದತ್ತವಾಗಿದ್ದರೆ ರಕ್ತ ಹೆಪ್ಪುಗಟ್ಟುವ ಅಪಾಯ 10ರಿಂದ 20 ಪಟ್ಟು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ರೋಗದ ಲಕ್ಷಣಗಳು ವ್ಯಕ್ತಿಯು ಹದಿಹರೆಯವನ್ನು ದಾಟಿದಾಗ ಕಾಣಿಸಿಕೊಳ್ಳತೊಡಗುತ್ತವೆ.