ಸೆ.28 ರಂದು ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆ

ಬೆಂಗಳೂರು, ಸೆ.26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಸೆ.28 ರಂದು ಬೆಳಗ್ಗೆ 11.30 ಕ್ಕೆ ಚುನಾವಣೆ ನಡೆಯಲಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಪಿ.ಕಳಸದ್ ತಿಳಿಸಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಕಚೇರಿಯ ಆವರಣದಲ್ಲಿರುವ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಬಿಬಿಎಂಪಿ ಸದಸ್ಯರು, ನಗರ ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 259 ಜನ ಮತ ಚಲಾವಣೆ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಚುನಾಯಿತ ಸದಸ್ಯರು 198 ಜನ, ರಾಜ್ಯಸಭಾ ಸದಸ್ಯರು 9 ಜನ, ಸಂಸದರು 5 ಜನ, ಶಾಸಕರು 28 ಜನ, ವಿಧಾನಪರಿಷತ್ ಸದಸ್ಯರು 19 ಜನ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಚುನಾವಣೆ ಆರಂಭವಾಗುವ ಎರಡು ಗಂಟೆ ಮೊದಲೇ(ಬೆಳಗ್ಗೆ 9-30ಕ್ಕೆ) ಹಾಜರಾತಿ ದೃಢೀಕರಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಬಹುದಾಗಿದೆ. ನಿಗದಿತ ಸಮಯದ ನಂತರ ಬರುವವರಿಗೆ ಕಾನೂನು ಪ್ರಕಾರ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಳಸದ್ ಹೇಳಿದರು. ಇದೇ ವೇಳೆ ಪಾಲಿಕೆಯ 12 ಸ್ಥಾಯಿ ಸಮಿತಿ ಸಮಿತಿಗಳ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗದೇ ಇರುವುದರಿಂದ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.







