ಸುಪ್ರೀಂ ತೀರ್ಪು ಜನರಿಗೆ ಅನೈತಿಕ ಸಂಬಂಧಕ್ಕೆ ಪರವಾನಿಗೆ: ಸಾಮಾಜಿಕ ಹೋರಾಟಗಾರರು ಟೀಕೆ

ಹೊಸದಿಲ್ಲಿ, ಸೆ. 27: ಅನೈತಿಕ ಸಂಬಂಧ ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ನೀಡಿದ ತೀರ್ಪನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ. ಆದರೆ, ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ತೀರ್ಪನ್ನು ಮಹಿಳಾ ವಿರೋಧಿ ಎಂದು ಬಣ್ಣಿಸಿರುವ ಅವರು, ಇದು ಜನರಿಗೆ ಅನೈತಿಕತೆಗೆ ಪರವಾನಿಗೆ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅನೈತಿಕ ಸಂಬಂಧ ಅಪರಾಧ ಎಂದು ಹೇಳುವ ಭಾರತೀಯ ದಂಡ ಸಂಹಿತೆ 497ನೆ ಕಲಂ ಅನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ರದ್ದುಗೊಳಿಸಿದೆ. ಇದು ಏಕಪಕ್ಷೀಯ, ಪ್ರಾಚೀನ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಸಮಾನತೆ ನೀಡುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪೀಠ ಪ್ರತಿಪಾದಿಸಿದೆ. ಅನೈತಿಕ ಸಂಬಂಧ ಅಪರಾಧ ಅಲ್ಲ ಎಂದು ಹೇಳುವ ಮೂಲಕ ದೇಶದ ಮಹಿಳೆಯರ ನೋವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೇವೆ ಎಂದು ದಿಲ್ಲಿ ಮಹಿಳಾ ಆಯೋಗದ ವರಿಷ್ಠೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ. ಅನೈತಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ತೀರ್ಪು ಮಹಿಳಾ ವಿರೋಧಿ. ಈ ತೀರ್ಪು ದೇಶದ ಜನರಿಗೆ ವಿವಾಹವಾಗಲು ಮುಕ್ತ ಪರವಾನಿಗೆ ನೀಡಿದಂತಾಗಿದೆ. ಆದರೆ, ಅದೇ ಸಂದರ್ಭ ಅನೈತಿಕ ಸಂಬಂಧಕ್ಕೂ ಪರವಾನಿಗೆ ನೀಡಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ ವಿವಾಹದ ಪವಿತ್ರತೆ ಎಲ್ಲಿದೆ ? ಎಂದು ಅವರು ಪ್ರಶ್ನಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆ ಈ ತೀರ್ಪಿನ ಬಗ್ಗೆ ಸ್ಪಷ್ಟತೆ ಕೋರಿದ್ದಾರೆ ಹಾಗೂ ಹಾಗಾದರೆ ತೀರ್ಪು ಬಹುಪತ್ನಿತ್ವ, ಬಹುಪತಿತ್ವಕ್ಕೆ ಅವಕಾಶ ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
‘‘ಪುರುಷರು ಸಾಮಾನ್ಯವಾಗಿ ಮೂರ್ನಾಲ್ಕು ಬಾರಿ ವಿವಾಹವಾಗುತ್ತಾರೆ. ಇವರಲ್ಲಿ ಕೆಲವು ಪತ್ನಿಯರನ್ನು ತ್ಯಜಿಸುತ್ತಾರೆ. ಅನೈತಿಕತೆ ಅಪರಾಧವಲ್ಲದೇ ಇದ್ದರೆ, ಮಹಿಳೆ ತ್ಯಜಿಸಿದ ಪತಿಯ ವಿರುದ್ಧ ಕೇಸು ದಾಖಲಿಸುವುದು ಹೇಗೆ? ಇದು ಆತಂಕದ ವಿಚಾರ’’
ಬೃಂದಾ ಅಡಿಗೆ





