ವಿಶ್ವದ ಶ್ರೇಷ್ಠ ಸಂಸ್ಥೆಗಳ ಪಟ್ಟಿ: ಭಾರತದ ಸಂಸ್ಥೆಗಳಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರಗಣ್ಯ

ಹೊಸದಿಲ್ಲಿ, ಸೆ.27: ಟೈಮ್ಸ್ ಹೈಯರ್ ಎಜುಕೇಷನ್ಸ್ (ಟಿಎಚ್‌ಇ) ಬಿಡುಗಡೆಗೊಳಿಸಿರುವ 2019ರ ವಿಶ್ವದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಸಂಸ್ಥೆಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್ (ಐಐಎಸ್‌ಸಿ) ಅಗ್ರ ಸ್ಥಾನ ಪಡೆದಿದೆ. ಆದರೆ ವಿಶ್ವದ ಶ್ರೇಷ್ಟ 250 ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವುದೇ ಸಂಸ್ಥೆ ಕಾಣಿಸಿಕೊಂಡಿಲ್ಲ.
ಆಕ್ಸ್‌ಫರ್ಡ್ ವಿವಿ ಪ್ರಥಮ, ಕ್ಯಾಂಬ್ರಿಡ್ಜ್ ವಿವಿ ದ್ವಿತೀಯ, ಸ್ಟಾನ್‌ಫೋರ್ಡ್ ತೃತೀಯ, ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ನಾಲ್ಕನೇ ಸ್ಥಾನ ಪಡೆದಿದೆ. ಆದರೆ ಭಾರತದ ಯಾವುದೇ ಸಂಸ್ಥೆಗಳು 250ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಬೆಂಗಳೂರಿನ ಐಐಎಸ್‌ಸಿ 251ರಿಂದ 300ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಎರಡನೇ ಅತ್ಯುತ್ತಮ ಸಂಸ್ಥೆ ಎನಿಸಿಕೊಂಡಿರುವ ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 400ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 351ರಿಂದ 400ರ ಶ್ರೇಣಿಯಲ್ಲಿದ್ದ ಐಐಟಿ ಬಾಂಬೆ ಈ ಬಾರಿ 401ರಿಂದ 500ರವರೆಗಿನ ಶ್ರೇಣಿಗೆ ಕುಸಿದಿದೆ. ಕಳೆದ ವರ್ಷ 801ರಿಂದ 1000ದವರೆಗಿನ ಶ್ರೇಣಿಯಲ್ಲಿದ್ದ ತಮಿಳುನಾಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಮೃತ ವಿಶ್ವ ವಿದ್ಯಾಪೀಠಂ ಈ ವರ್ಷ 601ರಿಂದ 800ರ ಶ್ರೇಣಿಯಲ್ಲಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಭಾರತದ 42 ಸಂಸ್ಥೆಗಳು ಸ್ಥಾನ ಪಡೆದಿದ್ದರೆ ಈ ವರ್ಷ ಈ ಸಂಖ್ಯೆ 49ಕ್ಕೇರಿದೆ. ಇದರೊಂದಿಗೆ ಅತ್ಯುತ್ತಮ ಪ್ರಾತಿನಿಧಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆದಿದೆ.





