ವಿಧಾನಸಭೆ ವಿಸರ್ಜನೆಯಾದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿ: ಚುನಾವಣಾ ಆಯೋಗ

ಹೊಸದಿಲ್ಲಿ, ಸೆ.27: ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಿದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುತ್ತದೆ ಎಂದು ಚುನಾವಣಾ ಆಯೋಗ ಗುರುವಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೊಂಡಂತಾಗಿದೆ. ವಿಧಾನಸಭೆ ವಿಸರ್ಜನೆಗೊಂಡ ಬಳಿಕ ಉಸ್ತುವಾರಿ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಆ ರಾಜ್ಯದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವಂತಿಲ್ಲ. ಅಲ್ಲದೆ ಎಂಸಿಸಿ(ಮಾದರಿ ನೀತಿ ಸಂಹಿತೆ)ಯ 7ನೇ ವಿಭಾಗದಲ್ಲಿ ಪ್ರತಿಬಂಧಿಸಲಾಗಿರುವ ಯಾವುದೇ ಕಾರ್ಯವನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. .
ಈ ಬಗ್ಗೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಂಪುಟ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆಯೋಗ, ವಿಧಾನಸಭೆ ವಿಸರ್ಜನೆಯಾದಂದಿನಿಂದ ಹೊಸ ವಿಧಾನಸಭೆ ರಚನೆಗೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ. ಲೋಕಸಭಾ ಚುನಾವಣೆಯ ಜೊತೆಯಲ್ಲೇ ರಾಜ್ಯಸಭೆಯ ಚುನಾವಣೆ ನಡೆಯುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ , ಅವಧಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ನಡೆಯಬೇಕೆಂಬ ಆಶಯದೊಂದಿಗೆ ತೆಲಂಗಾಣದಲ್ಲಿ ಸೆ.6ರಂದು ವಿಧಾನಸಭೆಯನ್ನು ವಿಸರ್ಜಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶಿಫಾರಸು ಮಾಡಿದ್ದರು. ಆದರೆ ಆ ರಾಜ್ಯದಲ್ಲಿ ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.







