‘ನ್ಯಾನೋ ತಂತ್ರಜ್ಞಾನ’ ಯಾವುದೇ ಕ್ರಾಂತಿಗೂ ಕಡಿಮೆ ಇಲ್ಲ: ಪ್ರೊ.ಸಿಎನ್‌ಆರ್ ರಾವ್

ಬೆಂಗಳೂರು, ಸೆ. 27: ಇನ್ನು ಕೆಲವೇ ವರ್ಷಗಳಲ್ಲಿ ‘ನ್ಯಾನೋ ತಂತ್ರಜ್ಞಾನ’ವು ಜನರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಪರಿಚಯಿಸಲಿದೆ. ಇದು ಯಾವುದೇ ಕ್ರಾಂತಿಗಿಂತ ಕಡಿಮೆಯಿಲ್ಲ ಎಂದು ಭಾರತ ರತ್ನ, ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಇಂದಿಲ್ಲಿ ಹೇಳಿದ್ದಾರೆ.
ಗುರುವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ‘ಬೆಂಗಳೂರು ಇಂಡಿಯಾ ನ್ಯಾನೋ’ 10ನೆ ಆವೃತ್ತಿಯ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಡಿಸೆಂಬರ್ 5ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನವು ಪ್ರಸ್ತುತ ಪಡಿಸಲಿದೆ ಎಂದರು.
ಮಲ್ಟಿ-ಟ್ರಾಕ್ ಕಾನ್ಫರೆನ್ಸ್, ಅಂತರ್‌ರಾಷ್ಟೀಯ ವಸ್ತು ಪ್ರದರ್ಶನ, ರಿಚ್ ಫೋರಂ (ಸಂಶೋಧನೆ ಉದ್ಯಮ ಸಹಯೋಗ ಕೇಂದ್ರ), ನ್ಯಾನೋ ಪರಿಣಿತಿ ಪುರಸ್ಕಾರಗಳು, ವಾಕ್ ಅವೇ ಆಫ್ ಡಿಸ್ಕವರಿ ಕುರಿತು ಪೋಸ್ಟರ್ ಪ್ರದರ್ಶನ ಸೇರಿದಂತೆ ವಿವಿಧ ವಿಷಯಗಳ ವಿಸ್ತೃತ ಚರ್ಚೆ, ಸಂವಾದ ನಡೆಯಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಇಂಡಿಯಾ ನ್ಯಾನೋ ಭಾರತದ ಪ್ರಮುಖ ಅಂತರ್‌ರಾಷ್ಟ್ರೀಯ ನ್ಯಾನೋ ತಂತ್ರಜ್ಞಾನ ಸಂಬಂಧಿತ ಸಮ್ಮೇಳನ. ಈ ಸಮ್ಮೇಳನ ದೇಶದ ವಿಜ್ಞಾನಿಗಳು, ತಜ್ಞರು ಮತ್ತು ಉದ್ಯಮಿಗಳನ್ನು ಒಂದೆಡೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಬೆಂಗಳೂರು ಮತ್ತು ಕರ್ನಾಟಕವನ್ನು ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ತಲುಪಿಸಲು ಸದಾ ದುಡಿಯುತ್ತಿದೆ ಎಂದು ಬಣ್ಣಿಸಿದರು.
2007ರಿಂದ ಬೆಂಗಳೂರು ಇಂಡಿಯಾ ನ್ಯಾನೋ ಭಾರತದಲ್ಲಷ್ಟೇ ಅಲ್ಲ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ನ್ಯಾನೋ ವಿಜ್ಞಾನದ ಕುರಿತು ನಡೆಯುವ ಪ್ರಮುಖ ಸಮ್ಮೇಳನಗಳಲ್ಲಿ ಒಂದಾಗಿದೆ. 10ನೆ ಆವೃತ್ತಿಯು ನ್ಯಾನೋ ತಂತ್ರಜ್ಞಾನ ಕ್ಷೇತ್ರಕ್ಕೆ ಇನ್ನಷ್ಟು ಒಳನೋಟಗಳನ್ನು ತರುವ ಮೂಲಕ ನಮ್ಮ ಬೆಂಗಳೂರು ನಗರ ಮತ್ತು ರಾಜ್ಯವು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂದರು.







