ಅಯೋಧ್ಯೆ ವಿವಾದದ ಸುಪ್ರೀಂ ತೀರ್ಪು: ಶಿವಮೊಗ್ಗದಲ್ಲಿ ಮೆರವಣಿಗೆ, ಕಾರ್ಯಕ್ರಮ ನಿಷೇಧಿಸಿ ಆದೇಶ
ಶಿವಮೊಗ್ಗ, ಸೆ.27: ಅಯೋಧ್ಯೆ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಸೆ.28ರ ಬೆಳಗ್ಗೆ 6 ಗಂಟೆಯವರೆಗೆ ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ, ಶವಸಂಸ್ಕಾರ, ಮದುವೆ, ಇತರ ಧಾರ್ಮಿಕ ಆಚರಣೆ ನಡೆಸಲು ಹಾಗೂ ಈ ಮೊದಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಮತ್ತು ಕಾರ್ಯಾಚರಣೆ ಅಧಿಕಾರಿಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ‘ಉಚ್ಚ ನ್ಯಾಯಾಲಯವು ಬಾಬರಿ ಮಸೀದಿ ವಿವಾದದ ಕುರಿತಂತೆ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯು ಸೂಕ್ಷ್ಮತೆಯಿಂದ ಕೂಡಿರುವ ಕಾರಣದಿಂದ ಶಾಂತಿ-ಸುವ್ಯವಸ್ಥೆ ಕಾಯ್ದುಕೊಳ್ಳಲು, ಸೌಹಾರ್ದ ಕಾಪಾಡಲು ಗಣೇಶಮೂರ್ತಿ ವಿಸರ್ಜನೆ ಹೊರತುಪಡಿಸಿ ಉಳಿದೆಲ್ಲ ಮೆರವಣಿಗೆ-ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ಆದೇಶದಲ್ಲಿ ತಿಳಿಸಿದ್ದಾರೆ.
ಭದ್ರತೆ: ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಶಿವಮೊಗ್ಗ ನಗರದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗುಗೊಳಿಸಿದೆ. ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಿದೆ.





