ಸಂಚಾರಿ ನಿಯಮ ಉಲ್ಲಂಘನೆ: 80 ಆಟೋ, 4 ಬಸ್‍ಗಳ ವಿರುದ್ಧ ಕೇಸ್

ತುಮಕೂರು,ಸೆ.27: ತುಮಕೂರು ನಗರ ವೃತ್ತ ನಿರೀಕ್ಷಕರು ಹಾಗೂ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಸೂಕ್ತ ದಾಖಲಾತಿಗಳಿಲ್ಲದೆ ನಗರದಲ್ಲಿ ಸಂಚರಿಸುತ್ತಿದ್ದ 80 ಕ್ಕೂ ಹೆಚ್ಚು ಆಟೋ ರಿಕ್ಷಾಗಳನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದು ಕಾನೂನು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟಂಬರ್ 26 ರಂದು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಬಸ್ ನಿಲ್ದಾಣಗಳ ಬಳಿ(ಬಸ್ ಬೇ) ಬಸ್‍ಗಳನ್ನು ನಿಲ್ಲಿಸದೇ ರಸ್ತೆಯ ಮದ್ಯಭಾಗದಲ್ಲಿ ಬಸ್‍ಗಳನ್ನು ನಿಲ್ಲಿಸಿ ಸಂಚಾರ ವ್ಯವಸ್ಥೆಗೆ ತೊಂದರೆಯುಂಟು ಮಾಡಿ ಕಾನೂನು ಉಲ್ಲಂಘನೆ ಮಾಡಿದ 03 ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಹಾಗೂ 01 ಖಾಸಗಿ ಬಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ತುಮಕೂರು ನಗರದಲ್ಲಿ ಅಪ್ರಾಪ್ತರು, ಪಡ್ಡೆ ಹುಡುಗರು ದ್ವಿಚಕ್ರ ವಾಹನ ಚಾಲನೆ ಮಾಡುವ ಬಗ್ಗೆ, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೂರು ಜನರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದುದರ ಬಗ್ಗೆ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳಿಗೆ ಪತ್ರ ವ್ಯವಹಾರ ಮಾಡಿ ವಿದ್ಯಾರ್ಥಿಗಳಿಗೆ ಸೂಚನೆಗಳನ್ನೂ ಸಹ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸೆಪ್ಟಂಬರ್ 27ರ ಗುರುವಾರ ಬೆಳಗ್ಗೆ ತುಮಕೂರು ನಗರದಲ್ಲಿ ಅಪ್ರಾಪ್ತರು, ಪಡ್ಡೆ ಹುಡುಗರು ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನು ಪತ್ತೆ ಮಾಡಿ 28 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ಪೋಷಕರು ವಾಹನ ಚಾಲನಾ ಪರವಾನಿಗೆ ಇಲ್ಲದೆ ಇರುವ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲು ನೀಡಬಾರದು. ಒಂದು ವೇಳೆ ನೀಡಿದ್ದೇ ಆದರೆ ಅಂತಹ ಪೋಷಕರ ವಿರುದ್ದ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಸಂಚಾರಿ ನಿಯಮಗಳನ್ನು ಪಾಲಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಯಾವಾಗಲೂ ಪೊಲೀಸ್ ಇಲಾಖೆ ಬೆನ್ನೆಲುಬಾಗಿರುತ್ತದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮನವಿ ಮಾಡಿದ್ದಾರೆ.







