ಸುರಕ್ಷತಾ ಕ್ರಮ ಇನ್ನಷ್ಟು ಕಠಿಣಗೊಳ್ಳಲಿ!
ಮಾನ್ಯರೇ,
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳಾ ಸುರಕ್ಷತೆಗೆ ಹಲವು ಕಾನೂನು ಕ್ರಮ ಕೈಗೊಂಡಿದ್ದರೂ ಅವುಗಳ ಸಕ್ರಿಯ ಬಳಕೆ ಇಂದಿಗೂ ಆಗದೆ ಇರುವುದು ವಿಪರ್ಯಾಸ. ಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗಾಗಿಯೇ ಆಸನಗಳನ್ನು ಮೀಸಲಿಡಲಾಗಿದೆ. ಆದರೆ ಹೆಚ್ಚಿನ ಕಡೆ ಪುರುಷರು ಅವುಗಳನ್ನು ಆಕ್ರಮಿಸಿಕೊಳ್ಳುತ್ತಾರೆ. ಅಲ್ಲದೆ ಮಹಿಳೆಯರ ಆಸನದಲ್ಲಿ ಕುಳಿತು ಪ್ರಯಾಣಿಸುವ ಪುರುಷರಿಗೆ ದಂಡ ವಿಧಿಸಲಾಗುವುದು ಎಂಬ ಫಲಕಗಳನ್ನು ಬಸ್ಸಿನಲ್ಲಿ ಹಾಕಿರುತ್ತಾರೆ. ಆದರೆ ಇದಕ್ಕೆ ಬೆಲೆಯೇ ಇರುವುದಿಲ್ಲ. ನಿರ್ವಾಹಕರು ಕೂಡಾ ಅಲ್ಲಿ ಕುಳಿತಿರುವವರನ್ನು ಎಬ್ಬಿಸಲು ಮನಸ್ಸು ಮಾಡುವುದಿಲ್ಲ. ಮಹಿಳೆ ಅದನ್ನು ಪ್ರಶ್ನಿಸಿದರೆ ಆಕೆಗೆ ಹಿಂಸೆಯಾಗುವಂತಹ ಮಾತಿನಿಂದ ಅವಮಾನಿಸಲಾಗುತ್ತದೆ. ಇದು ಕೇವಲ ಬಸ್ಸಿನಲ್ಲಿ ಮಾತ್ರವಲ್ಲ, ಮಹಿಳೆಯರು ರೈಲಿನಲ್ಲಿ ಓಡಾಡುವಾಗಲೂ ಅಲ್ಲಿಯೂ ಮಹಿಳೆಯರ ಪ್ರತ್ಯೇಕ ಬೋಗಿಗೆ ಕೆಲವು ಪುರುಷರು ಕಾನೂನುಬಾಹಿರವಾಗಿ ಪ್ರವೇಶಿಸಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಸಂಬಂಧಿಸಿದವರು ಕಠಿಣ ಕ್ರಮ ತೆಗೆದುಕೊಳ್ಳದಿರುವುದರಿಂದ ಇಂತಹ ಘಟನೆಗಳು ಮಾಮೂಲಿಯಾಗಿದೆ. ಸರಕಾರವು ಇನ್ನಾದರೂ ಕಟ್ಟುನಿಟ್ಟಿನ ಮಹಿಳಾ ಸುರಕ್ಷತಾ ಕಾನೂನು ಕ್ರಮವನ್ನು ಜಾರಿಗೊಳಿಸುವುದು ಅತ್ಯಗತ್ಯ.





