ಖಾಸಗಿ ಬಸ್ ವಿರುದ್ಧ ಪರವಾನಿಗೆ ಅಮಾನತಿನಂತಹ ಕ್ರಮ: ಪೊಲೀಸ್ ಕಮಿಷನರ್
ಪೊಲೀಸ್ ಫೋನ್‌ಇನ್ ಕಾರ್ಯಕ್ರಮ

ಮಂಗಳೂರು, ಸೆ.28: ಪ್ರಯಾಣಿಕರಿಗೆ ಟಿಕೆಟ್ ನೀಡದೆ ಸಂಚರಿಸುವ ಖಾಸಗಿ ಬಸ್‌ಗಳ ವಿರುದ್ಧ ಪರವಾನಿಗೆ ಅಮಾನತಿನಂತಹ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಬಹುತೇಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನಿರ್ವಾಹಕರು ಉದ್ಧಟತನದಿಂದ ವರ್ತಿಸುತ್ತಾರೆ. ಬಸ್‌ಗಳನ್ನು ಹತ್ತಿ ಇಳಿಯುವಾಗಲೂ ಅವಸರಪಡಿಸುತ್ತಿದ್ದಾರೆ. ಇದರಿಂದ ಅಪಘಾತಗಳಾಗುವ ಸಂಭವ ಇದೆ. ಖಾಸಗಿ ಬಸ್‌ಗಳ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವಂತೆ ಕುಂಜತ್ತಬೈಲ್‌ನ ನಾಗರಿಕರೊಬ್ಬರು ಆಗ್ರಹಿಸಿದರು.
ಈ ಬಗ್ಗೆ ಕಮಿಷನರ್ ಟಿ.ಆರ್.ಸುರೇಶ್ ಅವರು ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರಿಂದ ವಿವರಣೆ ಪಡೆದುಕೊಂಡರು. ಮಂಗಳೂರಿನಲ್ಲಿ ಸುಮಾರು 350ಕ್ಕಿಂತ ಅಧಿಕ ನಗರ ಸಾರಿಗೆ ಇದೆ. ಈ ಪೈಕಿ 100ರಷ್ಟು ಸಿಟಿ ಬಸ್‌ಗಳನ್ನು ಲೀಸ್‌ಗೆ ನೀಡಲಾಗಿದೆ. ಪರಸ್ಪರ ಒಪ್ಪಂದ ಪತ್ರ ಮುಖೇನ ಲೀಸ್‌ಗೆ ವಹಿಸಲಾಗಿದೆ. ಹಾಗಾಗಿ ಎಲ್ಲ ಬಸ್‌ಗಳ ಮೇಲೆ ನಮಗೆ ಹತೋಟಿ ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಸ್ ಲೀಸ್ ಬಗ್ಗೆ ಸಾರಿಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಕಮಿಷನರ್ ಟಿ.ಆರ್.ಸುರೇಶ್, ಬಸ್‌ಗಳ ಮಾಲೀಕತ್ವವನ್ನು ಈ ರೀತಿ ಲೀಸ್‌ಗೆ ನೀಡಲು ಬರುವುದಿಲ್ಲ. ಆದ್ದರಿಂದ ಲೀಸ್‌ನಲ್ಲಿ ಓಡಿಸುತ್ತಿರುವ ಬಸ್‌ಗಳ ಪಟ್ಟಿ ಮಾಡಿ ಪರವಾನಿಗೆ ಅಮಾನತ್ತಿನಂತಹ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಬಸ್‌ಗಳಲ್ಲಿ ಟಿಕೆಟ್ ನೀಡುವುದು ಕಡ್ಡಾಯ. ಅಲ್ಲದೆ ಚಾಲಕ, ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಂಚಾರ ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮಿಷಿನ್ ಮೂಲಕ ಟಿಕೆಟ್ ನೀಡಬೇಕೇ ಅಥವಾ ಮುದ್ರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಬೇಕೇ ಎಂಬ ಬಗ್ಗೆ ಬಸ್ ಮಾಲೀಕರೇ ಸಾರಿಗೆ ಇಲಾಖೆ ಜೊತೆಗೆ ಮಾತುಕತೆ ನಡೆಸಬೇಕು ಎಂದು ಸ್ಪಷ್ಟಪಡಿಸಿದರು.
ಅಧಿಕ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದಕ್ಕೆ 105 ಕೇಸ್, ಸಮವಸ್ತ್ರ ರಹಿತ ಚಾಲನೆಗೆ 95 ಕೇಸ್ ಹಾಗೂ ಟಿಕೆಟ್ ನೀಡದ ಬಗ್ಗೆ 50 ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಉಮಾ ಪ್ರಶಾಂತ್ ಹೇಳಿದರು.
ನಗರ ಪ್ರದೇಶದಲ್ಲಿ ಪರವಾನಿಗೆ ರಹಿತ ಆಟೋರಿಕ್ಷಾಗಳು ಸಂಚರಿಸುತ್ತಿವೆ. ಬಸ್‌ಗಳ ತಪಾಸಣೆ ನಡೆಸುವ ಪೊಲೀಸರು, ಆಟೋಗಳ ಬಗ್ಗೆ ನಿರ್ಲಕ್ಷ ತೋರಿಸುತ್ತಿದ್ದಾರೆ. ಗ್ರಾಮೀಣ ಆಟೋಗಳು ನಗರಕ್ಕೆ ಬಂದು ಬಾಡಿಗೆ ನಡೆಸುತ್ತಿದೆ. ಇವುಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಆಟೋ ಚಾಲಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಕಾರ್ಯಾಚರಣೆ ನಡೆಸುವುದಾಗಿ ಕಮಿಷನರ್ ಭರವಸೆ ನೀಡಿದರು.
ಟ್ರಾಫಿಕ್ ಸಮಸ್ಯೆ: ಯೆಯ್ಯೆಡಿ ಜಂಕ್ಷನ್, ಮಂಗಳೂರು ನರ್ಸಿಂಗ್ ಹೋಂನಿಂದ ಬಲ್ಮಠ, ಕೆಎಂಸಿ, ಪಾಂಡೇಶ್ವರ ರೈಲ್ವೆ ಹಳಿ, ಅಂಬೇಡ್ಕರ್ ವೃತ್ತ ಮುಂತಾದ ಕಡೆಗಳಲ್ಲಿ ವಾಹನಗಳನ್ನು ರಸ್ತೆಬದಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಬಸ್‌ಗಳು ಕೂಡ ಇದರಿಂದ ಹೊರತಾಗಿಲ್ಲ. ಇದರಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ನಾಗರಿಕರು ಅಹವಾಲು ಹೇಳಿದರು.
ನಗರದ ಬಬ್ಬುಕಟ್ಟೆ, ಬಲ್ಮಠ, ಅಂಬಿಕಾ ನಗರಗಳಲ್ಲಿ ರಸ್ತೆ ಹಂಪ್ಸ್ ಕಿತ್ತುಹೋಗಿದೆ. ಅದನ್ನು ಸರಿಪಡಿಸುವಂತೆ ನಾಗರಿಕರು ಕೋರಿದರು. ಸುರತ್ಕಲ್‌ನಲ್ಲಿ ಬಸ್ ನಿಲ್ದಾಣದಲ್ಲೇ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಈ ಬಗ್ಗೆ ಬಸ್ ಮಾಲೀಕರಿಗೆ ಸೂಚನೆ ನೀಡುವಂತೆ ನಾಗರಿಕರು ಆಗ್ರಹಿಸಿದರು.
ನಗರದ ಲೇಡಿಗೋಷನ್‌ನಿಂದ ಲೈಟ್‌ಹೌಸ್ ಹಿಲ್ ರೋಡ್‌ನಲ್ಲಿ ತಾತ್ಕಾಲಿಕ ಬಸ್ಟೇಂಡ್ ನಿರ್ಮಿಸುವಂತೆ ಲೋಕಾಯುಕ್ತರು ಕೂಡ ವಿಧಿಸಿದ ಗಡುವು ಮುಕ್ತಾಯಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ, ಪಾಲಿಕೆ ಹಾಗೂ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ವೃದ್ಧರಿಗೆ ತೊಂದರೆಯಾಗಿದೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.
ಮಂಜನಾಡಿ, ನಾಟೆಕಲ್, ಕಲ್ಲಾಪು, ನೇತ್ರಾವತಿ ನದಿ ಬದಿಗಳಲ್ಲಿ ರಸ್ತೆ ಬದಿ ತ್ಯಾಜ್ಯ ಬಿಸಾಡುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಅವರು ದೂರಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಭರವಸೆ ನೀಡಿದರು.
ಕಾರ್ಯಾಚರಣೆ ಬೇಡಿಕೆ: ಸ್ಟೇಟ್‌ಬ್ಯಾಂಕ್‌ನಲ್ಲಿ ರಸ್ತೆಯಲ್ಲೇ ಗುಜರಿ ಅಂಗಡಿಗಳು ತಲೆಎತ್ತಿವೆ. ಇವುಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ನಾಗರಿಕರು ಆಗ್ರಹಿಸಿದರು. ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಫುಟ್‌ಪಾತ್‌ನ್ನು ಆಕ್ರಮಿಸಿದ್ದಾರೆ. ಅವರನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದರು.
ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಒಟ್ಟು 32 ದೂರುಗಳನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳಾದ ಅಮಾನುಲ್ಲ ಎ., ಎಚ್. ಶಿವಪ್ರಕಾಶ್, ಕಬ್ಬಾಳ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಕಿ ಅವಘಡ ಭೀತಿ
ನಗರದಲ್ಲಿ ಗುರುವಾರ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಬಟ್ಟೆ ಅಂಗಡಿ ನಾಶಗೊಂಡ ವಿದ್ಯಮಾನ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪಗೊಂಡಿತು. ಹಿರಿಯ ನಾಗರಿಕರೊಬ್ಬರು ಕರೆ ಮಾಡಿ, ಹಳೆ ಕಟ್ಟಡಗಳಲ್ಲಿ ವಯರಿಂಗ್ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ
ನಡೆಸುವಂತೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಬಟ್ಟೆ ಅಂಗಡಿ ಬೆಂಕಿಗೆ ಆಹುತಿಯಾದಂತೆ ಆದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದರು.
ಕಟ್ಟಡ ಪರವಾನಿಗೆ ನವೀಕರಣ ವೇಳೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು ಎಂದು ಕಮಿಷನರ್ ಹೇಳಿದರು.
ಮರಳುಗಾರಿಕೆ ವಿರುದ್ಧ ಕ್ರಮ
ಅಳಿವೆಬಾಗಿಲು ಕುದ್ರು ಬಳಿ ಮರಳು ರಾಶಿ ಹಾಕಿ ಅಲ್ಲಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಗಾಗಲೇ ತಲಪಾಡಿಯಲ್ಲಿ ರಸ್ತೆ ಹಾಳಾಗಿದ್ದು, ಇದರಿಂದ ರಸ್ತೆ ಮತ್ತಷ್ಟು ಹದಗೆಡುವಂತಾಗಿದೆ. ಉಳ್ಳಾಲ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದರು.
ಅನಧಿಕೃತ ಬೋರ್ಡ್‌ಗಳ ತೆರವು
ನಗರ ಮಾಲ್ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ನೋ ಪಾರ್ಕಿಂಗ್ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿದೆ. ಇದರಿಂದಾಗಿ ನಾಗರಿಕರಿಗೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಫೋನ್-ಇನ್ ಕಾರ್ಯಕ್ರಮದಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದರು.
ಅನಧಿಕೃತವಾಗಿ ಅಳವಡಿಸಿದ ನೋ ಪಾರ್ಕಿಂಗ್ ಫಲಕಗಳ ವಿರುದ್ಧ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದೆ. ಆದರೂ ಮತ್ತೆ ಮತ್ತೆ ಫಲಕ ಹಾಕುತ್ತಿದ್ದಾರೆ. ಈ ಬಾರಿ ಅನಧಿಕೃತ ಫಲಕಗಳನ್ನು ಕಿತ್ತು ತರುವ ಕಾರ್ಯಾಚರಣೆ ನಡೆಸಲಾಗುವುದು. ಅಂತಹವರ ವಿರುದ್ಧ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಮೀನಿನ ಲಾರಿಗಳ ಉಪಟಳ
ಜಪ್ಪಿನಮೊಗರು, ಮಂಗಳಾದೇವಿ ಪರಿಸರದಲ್ಲಿ ಮುಂಜಾನೆ ಮೀನು ಸಾಗಾಟ ಲಾರಿಯಿಂದ ನೀರು ಸೋರಿಕೆಯಾಗಿ ಪರಿಸರ ದುರ್ನಾತಕ್ಕೆ ಕಾರಣವಾಗಿದೆ. ಧಾರ್ಮಿಕ ಕೇಂದ್ರಗಳು ಇರುವಲ್ಲಿ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಪ್ಪಿನಮೊಗರು ನಿವಾಸಿಯೊಬ್ಬರು ದೂರಿದರು.
ಜಪ್ಪಿನಮೊಗರಿನಿಂದ ಹೊಯ್ಗೆ ಬಜಾರ್ ನಡುವೆ ಮೀನು ಸಾಗಾಟ ಲಾರಿಗಳಿಂದ ತ್ಯಾಜ್ಯ ನೀರು ಸೋರಿಕೆಯಾಗುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದರು. ಬೆಳಗ್ಗೆ 6ರಿಂದ 8 ಗಂಟೆವರೆಗೆ ಈ ಮಾರ್ಗದಲ್ಲಿ ಪೊಲೀಸ್ ವಾಹನ ಕಾರ್ಯಾಚರಣೆ ನಡೆಸುವಂತೆ ಕಮಿಷನರ್ ಸೂಚಿಸಿದರು.







