ಇ-ಫಾರ್ಮಸಿ ವಿರೋಧಿಸಿ ಔಷಧಿ ಅಂಗಡಿಗಳ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಸೆ.28: ಇ-ಫಾರ್ಮಸಿ ವಿತರಣಾ ವ್ಯವಸ್ಥೆಯನ್ನು ದೇಶದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರಕಾರ, ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ಕರ್ನಾಟಕ ಸೇರಿದಂತೆ, ದೇಶಾದ್ಯಂತ ಕರೆ ನೀಡಿದ್ದ ಔಷಧಿ ಅಂಗಡಿಗಳ ಬಂದ್‌ಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಔಷಧಿ ಮೂಲವೇ ಗೊತ್ತಿಲ್ಲದೆ, ವಿತರಕನು ಯಾರು ಎಂಬುದನ್ನೇ ಅರಿಯದೆ, ಗುಣಮಟ್ಟದ ಪರಿಶೀಲಕನಾದ ಔಷಧ ನಿಯಂತ್ರಣಾಧಿಕಾರಿಗೂ ತಿಳಿದಿರದೇ, ಔಷಧಿಯ ವಿಷಯವನ್ನೇ ತಿಳಿಯದವನು ಇ-ಫಾರ್ಮಸಿ ವ್ಯವಸ್ಥೆಯಡಿ ಔಷಧಿಗಳನ್ನು ಎಲ್ಲಿಂದಲೋ ವಿತರಣೆ ಮಾಡಿದಲ್ಲಿ ಗ್ರಾಹಕನ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆಯೂ ಹೆಚ್ಚು. ಹಾಗೂ ಏನಾದರೂ ಆದಲ್ಲಿ ಕಾನೂನಾತ್ಮಕವಾಗಿ ಆರೋಪಿಸಲು ಇ-ಫಾರ್ಮಸಿಯಲ್ಲಿ ಸರಿಯಾದ ವ್ಯವಸ್ಥೆಯಿರುವುದಿಲ್ಲ ಎಂದು ಔಷಧಿ ವ್ಯಾಪಾರಿಗಳ ಸಂಘ ತಿಳಿಸಿತ್ತು.
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿನ ಔಷಧಿ ಮಳಿಗೆಗಳನ್ನು ಹೊರತುಪಡಿಸಿ ದೇಶಾದ್ಯಂತ 85 ಲಕ್ಷಕ್ಕೂ ಅಧಿಕ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ 6,500 ಸೇರಿದಂತೆ, ರಾಜ್ಯದಲ್ಲಿ 24 ಸಾವಿರ ಔಷಧಿ ಅಂಗಡಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಔಷಧಿ ಮಳಿಗೆಗಳನ್ನು ಮುಚ್ಚಿದ್ದರಿಂದ ರೋಗಿಗಳು ಹಾಗೂ ಸಾರ್ವಜನಿಕರು ಅಗತ್ಯ ಔಷಧಿಗಳಿಗಾಗಿ ಪರದಾಡುವಂತಾಯಿತು. ನಿನ್ನೆ ಮಧ್ಯರಾತ್ರಿಯವರೆಗೂ ಬಂದ್ ನಡೆದಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲಿನ ಔಷಧಿ ಮಳಿಗೆಗಳು ಸಂಪೂರ್ಣ ಮುಚ್ಚಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ಔಷಧಿ ಮಳಿಗೆಗಳ ಮೂಲಕ ಔಷಧಿಗಳನ್ನು ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವ ಇ-ಫಾರ್ಮಸಿ ವ್ಯವಸ್ಥೆಯ ನಿರ್ಧಾರದಿಂದ ಕೇಂದ್ರ ಸರಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಔಷಧಿ ವ್ಯಾಪಾರಿಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಔಷಧಿ ಮಳಿಗೆ ಮಾಲಕ ಉದಯ್ ಮಾತನಾಡಿ, ಬಂದ್ ಮಾಡುವಂತೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಎಂದಿನಂತೆ ಮಳಿಗೆಯನ್ನು ತೆರೆದು ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ. ಕೆಲವು ಗ್ರಾಹಕರು ಬಂದ್ ಇದ್ದರೂ ಏಕೆ ಮಳಿಗೆಯನ್ನು ತೆರೆದಿದ್ದೀರಿ ಎಂದು ಕೇಳುತ್ತಿದ್ದಾರೆ ಎಂದರು.
ಕಾನೂನಾತ್ಮಕವಲ್ಲದ ಇ-ಫಾರ್ಮಸಿ
ಇ-ಫಾರ್ಮಸಿ ಎಂಬ ಕೇಂದ್ರ ಸರಕಾರದ ಹೊಸ ನೀತಿಯ ವಿರುದ್ಧ ಗ್ರಾಹಕರನ್ನು ಜಾಗೃತಗೊಳಿಸಿ, ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವ್ಯಾಪಾರಸ್ಥರಾಗಿ ನಮ್ಮ ಮೇಲಿದೆ. ಕಾನೂನಾತ್ಮಕವಲ್ಲದ ರೀತಿಯಲ್ಲಿ ಇ-ಫಾರ್ಮಸಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ದುರಂತ.
- ರಘುನಾಥ್ ರೆಡ್ಡಿ, ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ







