ಇ-ಫಾರ್ಮಸಿ ವಿರೋಧಿಸಿ ಮೆಡಿಕಲ್ ಶಾಪ್‍ಗಳ ಬಂದ್: ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ
ಶಿವಮೊಗ್ಗ, ಸೆ. 28: ಆನ್‍ಲೈನ್ ಮೂಲಕ ಔಷಧ ಮಾರಾಟ (ಇ-ಫಾರ್ಮಸಿ) ಕ್ಕೆ ಅವಕಾಶ ನೀಡದಂತೆ ಆಗ್ರಹಿಸಿ ಶುಕ್ರವಾರ ದೇಶಾದ್ಯಂತ ಕರೆ ನೀಡಲಾಗಿದ್ದ 24 ಗಂಟೆಗಳ ಮೆಡಿಕಲ್ ಶಾಪ್‍ಗಳ ಬಂದ್‍ಗೆ ಶಿವಮೊಗ್ಗ ನಗರದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಮುಕ್ಕಾಲುಪಾಲು ಮೆಡಿಕಲ್ ಶಾಪ್‍ಗಳು, ಬೆಳಿಗ್ಗೆಯಿಂದಲೇ ಬಾಗಿಲು ಮುಚ್ಚಿದ್ದವು. ಇದರಿಂದ ಅಗತ್ಯ ಔಷಧಗಳ ಖರೀದಿಗೆ ನಾಗರೀಕರು ಪರದಾಡುವಂತಾಗಿತ್ತು. ಕೆಲ ರೋಗಿಗಳು ಹಾಗೂ ಅವರ ಕಡೆಯವರು ತೀವ್ರ ತೊಂದರೆ ಎದುರಿಸುವಂತಾಯಿತು. ಉಳಿದಂತೆ ಆಸ್ಪತ್ರೆಗಳಲ್ಲಿಯೇ ಮೆಡಿಕಲ್ ಶಾಪ್ ವ್ಯವಸ್ಥೆಯಿದ್ದ ಕಡೆ ಔಷಧ ಖರೀದಿಗೆ ಅಡ್ಡಿಯಾಗಲಿಲ್ಲ.
ಪ್ರತಿಭಟನೆ: ಫಾರ್ಮಸಿಸ್ಟ್ ಸಂಘಟನೆಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದವು. 'ಯಾವುದೇ ಕಾರಣಕ್ಕೂ ದೇಶದಲ್ಲಿ ಇ-ಫಾರ್ಮಸಿಸ್ಟ್ ವ್ಯವಸ್ಥೆಗೆ ಜಾರಿಗೆ ಆಸ್ಪದ ನೀಡಬಾರದು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಆನ್‍ಲೈನ್ ಔಷಧ ವ್ಯಾಪಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಔಷಧ ವ್ಯಾಪಾರವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿರುವ ಸುಮಾರು 8 ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ. ಹಲವು ವರ್ಷಗಳ ಕಾಲ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿ ಪದವಿ ಪಡೆದು, ಲಕ್ಷಾಂತರ ರೂ. ವೆಚ್ಚ ಮಾಡಿ ಉದ್ಯಮ ನಡೆಸುತ್ತಿರುವ ಔಷಧ ವ್ಯಾಪಾರಿಗಳು ತೊಂದರೆಗೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಆನ್‍ಲೈನ್ ಮೂಲಕ ಔಷಧ ಖರೀದಿಸುವ ವ್ಯವಸ್ಥೆಯಿಂದ ರೋಗಿಗಳಿಗೂ ಸಮರ್ಪಕವಾಗಿ, ಸಕಾಲದಲ್ಲಿ ಔಷಧಿಗಳು ಲಭ್ಯವಾಗದಿರುವ ಸಾಧ್ಯತೆಯಿದೆ. ಹಾಗೆಯೇ ಅಪ್ರಾಪ್ತರು, ಯುವ ಜನಾಂಗದವರು ಮಾದಕ ಔಷಧಗಳನ್ನು ಆನ್‍ಲೈನ್ ಮೂಲಕ ಖರೀದಿಸುವ ಸಾಧ್ಯತೆಯೂ ಇರುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರ ಆನ್‍ಲೈನ್ ಮೂಲಕ ಔಷಧ ವ್ಯಾಪಾರಕ್ಕೆ ಯಾವುದೇ ಕಾರಣಕ್ಕೂ ಉತ್ತೇಜನ ನೀಡಬಾರದು. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.







