ಶೇಷನ್ ಕಾಲದ ವಿಶ್ವಾಸಾರ್ಹತೆ ಉಳಿಸಿಕೊಳ್ಳಿ : ಚು.ಆಯೋಗಕ್ಕೆ ಸುಪ್ರೀಂ ಸಲಹೆ

ಹೊಸದಿಲ್ಲಿ, ಸೆ.28: ಟಿ.ಎನ್.ಶೇಷನ್ ಮುಖ್ಯಸ್ಥರಾಗಿದ್ದ ಸಂದರ್ಭ ಚುನಾವಣಾ ಆಯೋಗಕ್ಕಿದ್ದ ವಿಶ್ವಾಸಾರ್ಹತೆಯನ್ನು ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಪ್ರದರ್ಶಿಸಬೇಕೆಂದು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.
ಮತದಾರರ ಪಟ್ಟಿಯನ್ನು ಒದಗಿಸುವ ಸಂದರ್ಭ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಮತದಾರರ ಪಟ್ಟಿ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಪೀಠ ತಿಳಿಸಿದೆ. ನಕಲಿ ಮತದಾರರನ್ನು ಪತ್ತೆಹಚ್ಚಲು ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಸೂಚನೆ ನೀಡಬೇಕೆಂದು ಕೋರಿ ಮಧ್ಯಪ್ರದೇಶದ ನಿವಾಸಿ ಜಯಾ ಠಾಕೂರ್ ಅರ್ಜಿ ಸಲ್ಲಿಸಿದ್ದರು. ಮಧ್ಯಪ್ರದೇಶದಲ್ಲಿ ಕೇಂದ್ರ ಸರಕಾರ, ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಕೆಲವು ಹೆಸರನ್ನು ಕೈಬಿಡುವುದು ಸೇರಿದಂತೆ ಕೈಗೊಂಡಿರುವ ಕೆಲವು ಕ್ರಮಗಳಿಂದ ರಾಜ್ಯದಲ್ಲಿ ಮುಕ್ತ, ನ್ಯಾಯಯುತ,ನಿಷ್ಪಕ್ಷಪಾತದ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಪೀಠ, ದಾಖಲೆಪತ್ರದ ಬೆಂಬಲವಿರುವ ಬರಹ ಶೈಲಿಯ (ಟೆಕ್ಸ್ಟ್ ಮೋಡ್) ಮತದಾರರ ಪಟ್ಟಿ ಎಂದರೆ ಏನು ಎಂಬುದನ್ನು ವಿವರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ಅಲ್ಲದೆ ಶೇಷನ್ ಕಾಲದ ವಿಶ್ವಾಸಾರ್ಹತೆಯನ್ನು ಮುಂದುವರಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿತು.





