ಕಿವುಡರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿವೇಶನ ಮಂಜೂರು: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು, ಸೆ. 28: ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಲಾಪಕ್ಕೆ ಬಿಡಿಎ ವತಿಯಿಂದ ಪ್ರತ್ಯೇಕ ನಿವೇಶನ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಶುಕ್ರವಾರ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಿವುಡರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರವಣ ದೋಷ ಹೊಂದಿರುವವರಿಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ತೊಂದರೆಯಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಶ್ರವಣ ಮಾಪನ ಮಾಡಿ ಪ್ರಮಾಣ ಪತ್ರ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.
ಕಿವುಡರು ಸ್ವಉದ್ಯೋಗಕೆ ಆರ್ಥಿಕ ನೆರವು ನೀಡುವ ಸಂಬಂಧ ಹಣಕಾಸು ಇಲಾಖೆಗೆ ಈ ಪ್ರಸ್ತಾವ ಕಳುಹಿಸಿಕೊಡುವುದರ ಜತೆಗೆ, ಕ್ರೀಡಾ ಇಲಾಖೆಯಿಂದ ಸಹಾಯಧನವನ್ನು ತಕ್ಷಣವೇ ಬಿಡುಗಡೆ ಮಾಡಲಿದ್ದೇನೆ. ಈ ಸಮುದಾಯದ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.





