ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಶ್ಚಿತ: ಸಿದ್ದರಾಮಯ್ಯ

ಬೆಂಗಳೂರು, ಸೆ. 28: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ನಿಶ್ಚಿತ. ಆದರೆ, ಯಾರಿಗೆ ಎಷ್ಟು ಸ್ಥಾನ ಎಂದು ಇನ್ನೂ ಹಂಚಿಕೆ ಮಾಡಿಕೊಂಡಿಲ್ಲ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಇನ್ನೂ ಯಾವುದೇ ಚರ್ಚೆಯನ್ನೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ಮುಖಂಡರು ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಹತಾಶೆ: ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಿದ್ದ ಬಿಜೆಪಿಗೆ, ಅಧಿಕಾರ ಸಿಗದಿರುವುದರಿಂದ ಆ ಪಕ್ಷದ ನಾಯಕರು ಹತಾಶಗೊಂಡಿದ್ದಾರೆ. ಇದೇ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ಪಕ್ಷೇತರ ಕಾರ್ಪೋರೇಟರ್‌ಗಳ ಸಹಾಯದಿಂದ ಅಧಿಕಾರ ಹಿಡಿಯಲು ಬಿಜೆಪಿಯವರು ಪ್ರಯತ್ನ ಮಾಡಿದರು. ಆದರೆ, ಯಾವುದೇ ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡಲಿಲ್ಲ. ಕೊನೆಗೆ ಸೋಲುವ ಭಯದಿಂದ ಸಭಾತ್ಯಾಗ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.







