ಅ.3 ರಂದು ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ

ಬಾದಾಮಿ, ಸೆ.28: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಬಾಕಿಯಿರುವ ಸಚಿವ ಸ್ಥಾನಗಳನ್ನು ಹಾಗೂ ನಿಗಮ, ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಅಕ್ಟೋಬರ್ 3ರಂದು ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ನಂತರವೂ ಸರಕಾರ ಸುಭದ್ರವಾಗಿರಲಿದೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.
ಸಚಿವ ಸಂಪುಟಕ್ಕೆ ಸೇರಬಯಸುವ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸುಮಾರು 20 ಶಾಸಕರನ್ನು ಪ್ರಮುಖವಾದ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರಾರ್ಥನೆ ಮಾಡುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ರುಪೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾರ ಗೆಲುವು ಇಲ್ಲ, ಸೋಲು ಇಲ್ಲ. ಎರಡು ಸಮುದಾಯದವರಿಗೆ ತೀರ್ಪು ಸಮಾಧಾನ ತಂದಿದ್ದು, ಎಲ್ಲರೂ ಅದನ್ನು ಸ್ವಾಗತಿಸಿದ್ದಾರೆ. ಆದರೆ, ಆರೆಸೆಸ್ಸ್‌ನವರು ಈ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮತ್ತೆ ಗೆಲುವು ಸಾಧಿಸಿರುವುದಕ್ಕೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲಿ ಕಳೆದ ಮೂರು ಅವಧಿಯಲ್ಲಿ ನಮ್ಮದೇ ಆಡಳಿತವಿತ್ತು. ಈ ಬಾರಿಯೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಅದರಂತೆ, ಗೆಲುವು ಸಾಧಿಸಿದ್ದೇವೆ. ಮುಂದೆಯೂ ನಾವೇ ಅಧಿಕಾರ ನಡೆಸುತ್ತೇವೆ ಎಂದ ಸಿದ್ದರಾಮಯ್ಯ, ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಪ್ರತಿಕ್ರಿಯಿಸಿದರು.
ಅಹವಾಲು ಸಲ್ಲಿಕೆ: ನಾವು ಬಡವರು. ಗುಡಿಸಲಿನಲ್ಲಿ ವಾಸವಿದ್ದೇವೆ. ಒಂದು ಎಕರೆ ಹೊಲವಿದೆ. 13 ಲಕ್ಷ ರೂ.ಸಾಲವನ್ನು ಯಾವ ರೀತಿ ಭರಿಸಬೇಕು ಎಂಬುದೇ ತೋಚುತ್ತಿಲ್ಲ. ಕನಕದಾಸ ಸಹಕಾರ ಬ್ಯಾಂಕಿನ ಸಿಬ್ಬಂದಿ ಸಾಲ ಮರು ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಒಂದೇ ಕುಟುಂಬದ ಇಬ್ಬರು ಯುವತಿಯರು ಕಣ್ಣೀರಿಟ್ಟು ಸಿದ್ದರಾಮಯ್ಯಗೆ ತಮ್ಮ ಅಹವಾಲು ಸಲ್ಲಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಕನಕದಾಸ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ದೇವರಾಜ ಪಾಟೀಲ್, ಈ ಯುವತಿಯರ ತಂದೆ ಬ್ಯಾಂಕಿನಿಂದ 7 ಲಕ್ಷ ರೂ.ಗಳ ಸಾಲವನ್ನು ಪಡೆದಿದ್ದಾರೆ. ಆದರೆ, ಈವರೆಗೆ ಅದನ್ನು ಮರು ಪಾವತಿ ಮಾಡಿಲ್ಲ. ಬ್ಯಾಂಕಿನ ಸಿಬ್ಬಂದಿ ಸಾಲ ಮರು ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆಯೇ ಹೊರತು, ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಇನ್ನೂ ಹಲವಾರು ಮಂದಿ ಸರತಿ ಸಾಲಿನಲ್ಲಿ ನಿಂತು ಸಿದ್ದರಾಮಯ್ಯಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಸಂಕಷ್ಟದಲ್ಲಿರುವವರಿಗೆ ತುರ್ತಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಎಸ್.ಜಿ.ನಂಜಯ್ಯಮಠ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







