‘ರಾಫೆಲ್’ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ ಟೀಕೆ
ಕಲಬುರ್ಗಿ, ಸೆ. 28: ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಫ್ರಾನ್ಸ್ ಮಾಜಿ ರಾಷ್ಟ್ರಪತಿಗಳೇ ಹೇಳಿಕೆ ನೀಡಿದ್ದಾರೆ. ‘ಪ್ರಧಾನಿ ಒತ್ತಡಕ್ಕೆ ಮಣಿದು ಖಾಸಗಿ ವ್ಯಕ್ತಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಗರಣದ ಬಗ್ಗೆ ಉತ್ತರಿಸಬೇಕಾದ ಪ್ರಧಾನಿ ತನ್ನ ವಕ್ತಾರರ ಮೂಲಕ ಸ್ಪಷ್ಟಣೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೀಡಿರುವ ಪ್ರಧಾನಿ ಮೋದಿ ‘ಚೋರ್’ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿ ಪಾರದರ್ಶಕವಾಗಿದ್ದರೆ, ಪ್ರಾಮಾಣಿಕವಾಗಿದ್ದರೆ ಯಾವ ರೀತಿಯ ಒಪ್ಪಂದ ನಡೆದಿದೆ ಎಂಬುದನ್ನು ದೇಶದ ಜನತೆ ಮುಂದಿಡಬೇಕು. ಅದನ್ನು ಬಿಟ್ಟು ಬಾಯಿ ಮುಚ್ಚಿ ಕುಳಿತುಕೊಳ್ಳುವುದೆಂದರೆ ಏನರ್ಥ. ಸ್ವತಃ ಪ್ರಧಾನಿ ಮೋದಿಯವರೇ ಮುತುವರ್ಜಿ ವಹಿಸಿ ರಾಫೆಲ್ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚೋರ್ ಎಂಬ ಪದ ಬಳಕೆ ಮಾಡಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಖರ್ಗೆ ಪ್ರಶ್ನಿಸಿದರು.
ನಿಜಕ್ಕೂ ತಾವು ಪ್ರಾಮಾಣಿಕರಾಗಿದ್ದರೆ ಈ ಕುರಿತು ಜಂಟಿ ಸದನ ಸಮಿತಿ ರಚಿಸಿ ತನಿಖೆಗೆ ಒಳಪಡಿಸಿ. ಜಂಟಿ ಸದನ ಸಮಿತಿಯ ಮುಂದಿಡಲು ನಿಮಗೇಕೆ ಅಂಜಿಕೆ ಎಂದ ಖರ್ಗೆ, ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದರಿಂದಾಗಿಯೇ ಮೋದಿ ಜಂಟಿ ಸದನ ಸಮಿತಿ ರಚಿಸಿ ಅದರ ಮುಂದಿಡಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲ ಕಾರಣಕ್ಕಾಗಿ ಚೋರ್ ಎಂಬ ಪದ ಪ್ರಯೋಗ ಮಾಡಲಾಗಿದೆ ಎಂದು ಸ್ಪಷ್ಟಣೆ ನೀಡಿದರು.
ಮಹಿಳಾ ಸಮುದಾಯಕ್ಕೆ ಸಿಕ್ಕ ಜಯ
ದೇವಸ್ಥಾನಗಳಲ್ಲಿ ಒಬ್ಬರಿಗೆ ಪ್ರವೇಶ ನೀಡೋದು, ಮತ್ತೊಬ್ಬರಿಗೆ ನಿರಾಕರಿಸೋದು ಸಮಾನತೆಗೆ ವಿರುದ್ಧವಾದದ್ದು. ದೇಶದಲ್ಲಿ ಎಷ್ಟೋ ಕಡೆ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ಇಂದಿಗೂ ನಿಷಿದ್ಧವಾಗಿದೆ. ದೇಶದಲ್ಲಿ ಸಮಾನತೆ ಕಾಪಾಡುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಶಾದಾಯಕ ಬೆಳೆವಣಿಗೆಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸಮಾನತೆ ತತ್ವ ಎತ್ತಿ ಹಿಡಿದಂತಾಗಿದೆ. ಇದು ಮಹಿಳಾ ಸಮುದಾಯಕ್ಕೆ ಸಿಕ್ಕ ಜಯ .
-ಮಲ್ಲಿಕಾರ್ಜುನ ಖರ್ಗೆ ಲೋಸಭೆ ಕಾಂಗ್ರೆಸ್ ನಾಯಕ