ಇರಾನ್‌ನಿಂದ ತೈಲ ಆಮದು ಮುಂದುವರಿಕೆಗೆ ಭಾರತ ಬದ್ಧ: ಇರಾನ್ ವಿದೇಶ ಸಚಿವ

ವಿಶ್ವಸಂಸ್ಥೆ, ಸೆ. 28: ಇರಾನ್‌ನ ತೈಲವನ್ನು ಖರೀದಿಸಲು ಹಾಗೂ ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರನ್ನು ಗುರುವಾರ ಭೇಟಿಯಾದ ಬಳಿಕ ಇರಾನ್ ಸಚಿವರು ಈ ಮಾತನ್ನು ಹೇಳಿದ್ದಾರೆ.
ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಅಮೆರಿಕ ಮೇ ತಿಂಗಳಲ್ಲಿ ಹಿಂದೆ ಸರಿದ ಬಳಿಕ, ಅದು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಈ ದಿಗ್ಬಂಧನಗಳು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಆ ವೇಳೆಗೆ, ಭಾರತ ಸೇರಿದಂತೆ ಎಲ್ಲ ಮಿತ್ರ ದೇಶಗಳು ಇರಾನ್‌ನಿಂದ ಅವುಗಳ ತೈಲ ಆಮದನ್ನು ಶೂನ್ಯಕ್ಕೆ ಇಳಿಸಬೇಕೆಂದು ಅಮೆರಿಕ ತಾಕೀತು ಮಾಡಿದೆ.
‘‘ಇರಾನ್ ಜೊತೆಗಿನ ಆರ್ಥಿಕ ಸಹಕಾರವನ್ನು ಮುಂದುವರಿಸುವ ಹಾಗೂ ಅಲ್ಲಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುವ ಸಂಬಂಧ ನಮ್ಮ ಭಾರತೀಯ ಸ್ನೇಹಿತರು ಸ್ಪಷ್ಟ ನಿಲುವು ಹೊಂದಿದ್ದಾರೆ. ಈ ನಿಲುವನ್ನು ಭಾರತದ ವಿದೇಶ ಸಚಿವೆ ಸ್ಪಷ್ಟಪಡಿಸಿದ್ದಾರೆ’’ ಎಂದು ಶರೀಫ್ ಹೇಳಿದರು.





