ಪಿಎನ್‌ಬಿ ಬ್ಯಾಂಕ್‌ಗೆ 1,700 ಕೋ.ರೂ. ವಂಚನೆ: ಹೈದರಾಬಾದ್‌ನ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಹೊಸದಿಲ್ಲಿ, ಸೆ.28: ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ಟೆಲಿಕಾಂ ಉಪಕರಣ ನಿರ್ಮಾಣ ಸಂಸ್ಥೆ ‘ವಿಎಂಸಿ ಸಿಸ್ಟಮ್ಸ್ ’ ಹಾಗೂ ಅದರ ನಿರ್ದೇಶಕರ ವಿರುದ್ಧ 1,700 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ನೀರವ್ ಮೋದಿ ಹಾಗೂ ಇತರರು ಪಿಎನ್‌ಬಿ ಬ್ಯಾಂಕ್‌ಗೆ 13,500 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿರುವ ಬೆನ್ನಲ್ಲೇ ಈಗ ಸಾಲ ಪಾವತಿಸದೆ ವಂಚಿಸಿದ ಮತ್ತೊಂದು ಪ್ರಕರಣ ವರದಿಯಾಗಿದೆ. ಹೈದರಾಬಾದ್‌ನಲ್ಲಿರುವ ಸಂಸ್ಥೆಯ ಕಚೇರಿ ಹಾಗೂ ಅದರ ನಿರ್ದೇಶಕರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧನೆ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಟೆಲಿಕಾಂ ಮತ್ತು ವಿದ್ಯುತ್ ಕ್ಷೇತ್ರದ ಉಪಕರಣಗಳನ್ನು ನಿರ್ಮಾಣ ಮಾಡುವ ವಿಎಂಸಿ ಸಿಸ್ಟಮ್ಸ್ ಸಂಸ್ಥೆ 2009ರ ಆಗಸ್ಟ್ 12ರಂದು 1,010.50 ಕೋಟಿ ರೂ. ಮೊತ್ತದ ಬಂಡವಾಳ ಸಾಲ ಪಡೆದಿತ್ತು. ಈ ಸಾಲವನ್ನು ಇತರ ಉದ್ದೇಶಗಳಿಗೆ ಬಳಸಿಕೊಂಡಿರುವ ಈ ಸಂಸ್ಥೆ ಬ್ಯಾಂಕ್‌ನ ಒಕ್ಕೂಟಕ್ಕೆ 1,700 ಕೋಟಿ ರೂ. ಮೊತ್ತದ ಸಾಲ ಮರುಪಾವತಿಸದೆ ವಂಚಿಸಿದೆ ಎಂದು ಪಿಎನ್‌ಬಿ ದೂರು ನೀಡಿದೆ. ಇದರಲ್ಲಿ 539 ಕೋಟಿ ರೂ. ತನಗೆ ಬರಬೇಕಿದ್ದು ಉಳಿದ 1,207 ಕೋಟಿ ರೂ. ಮೊತ್ತ ಎಸ್‌ಬಿಐ, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಜೆ.ಎಂ.ಫೈನಾನ್ಶಿಯಲ್ ಅಸೆಟ್ಸ್ ರಿಕನ್‌ಸ್ಟ್ರಕ್ಷನ್ ಕಂಪೆನಿಗೆ ಮರುಪಾವತಿಸಬೇಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಂಕ್‌ನ ದೂರಿನ ಆಧಾರದಲ್ಲಿ ಸಂಸ್ಥೆಯ ನಿರ್ದೇಶಕರಾದ ವುಪ್ಪಲಪಟ್ಟಿ ಹಿಮ ಬಿಂದು, ಉಪ್ಪಲಪಟ್ಟಿ ವೆಂಕಟ ರಾಮರಾವ್ ಹಾಗೂ ಭಾಗವತುಲ ವೆಂಕಟರಮಣ ವಿರುದ್ಧ ಕ್ರಿಮಿನಲ್ ಒಳಸಂಚು, ಮೋಸ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.





