ಕೊಲೆಗಾರ ಹೇಳಿಕೆ: ಎನ್‌ಕೌಂಟರ್ ಪ್ರಕರಣದಿಂದ ನ್ಯಾಯಾಧೀಶರು ಹಿಂದಕ್ಕೆ ಸರಿಯಲು ಕೇಂದ್ರ ಮನವಿ
ಹೊಸದಿಲ್ಲಿ, ಸೆ.28: ನ್ಯಾಯಪೀಠದ ಸದಸ್ಯರಾಗಿರುವ ನ್ಯಾಯಾಧೀಶರೊಬ್ಬರು ಭದ್ರತಾ ಪಡೆಯ ಕೆಲವು ಸಿಬ್ಬಂದಿಯನ್ನು ಕೊಲೆಗಾರರು ಎಂದು ಸಂಬೋಧಿಸಿರುವ ಹಿನ್ನೆಲೆಯಲ್ಲಿ ಮಣಿಪುರ ಎನ್‌ಕೌಂಟರ್ ಪ್ರಕರಣದಿಂದ ಹಿಂದಕ್ಕೆ ಸರಿಯುವಂತೆ ಕೇಂದ್ರ ಸರಕಾರ ಪೀಠಕ್ಕೆ ಮನವಿ ಮಾಡಿದೆ.
2000ದಿಂದ 2012ರ ಮಧ್ಯೆ ಈಶಾನ್ಯ ರಾಜ್ಯದಲ್ಲಿ 350 ಭದ್ರತಾ ಸಿಬ್ಬಂದಿ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ 1,528 ನಕಲಿ ಎನ್‌ಕೌಂಟರ್‌ಗಳ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸುತ್ತಿರುವ ಪೀಠದಲ್ಲಿ ನ್ಯಾಯಾಧೀಶ ಮದನ್ ಬಿ.ಲೊಕುರ್ ಮತ್ತು ಯು.ಯು.ಲಲಿತ್ ಸದಸ್ಯರಾಗಿದ್ದಾರೆ. ಈ ಕುರಿತು ಜುಲೈ 31ರಂದು ನಡೆದ ವಿಚಾರಣೆಯ ವೇಳೆ ನ್ಯಾಯಾಧೀಶ ಲೊಕುರ್ ಸಿಬಿಐಯನ್ನು ಉದ್ದೇಶಿಸಿ, ನಿಮ್ಮ ಪ್ರಕಾರ ಈ ಪ್ರಕರಣಗಳಲ್ಲಿ 14 ಕೊಲೆಗಾರರಿದ್ದಾರೆ ಮತ್ತು ಅವರು ಮಣಿಪುರದಲ್ಲಿ ಮುಕ್ತವಾಗಿ ನಡೆದಾಡುತ್ತಿದ್ದಾರೆ. ನೀವು ಯಾವೊಬ್ಬನನ್ನೂ ಬಂಧಿಸಿಲ್ಲ. ಸಮಾಜದ ಗತಿಯೇನು? ಯಾರಾದರೂ ಅತ್ಯಾಚಾರ ಮಾಡಿದರೆ, ಅಲ್ಲಿ ವಶಪಡಿಸಿಕೊಳ್ಳುವಂಥದ್ದೇನಿದೆ? ಹಾಗಾದರೆ ನೀವು ಆತನನ್ನು ಮುಕ್ತವಾಗಿ ಅಲೆದಾಡಲು ಬಿಡುತ್ತೀರಾ? ಎಂದು ಖಾರವಾಗಿ ನುಡಿದಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಭದ್ರತಾ ಪಡೆ ಸಿಬ್ಬಂದಿ ಸಲ್ಲಿಸಿರುವ ಅರ್ಜಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳುತ್ತಾ, ತಮ್ಮನ್ನು ಅತ್ಯಾಚಾರಿಗಳಿಗೆ ಹೋಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಪ್ರಕರಣದ ನ್ಯಾಯಸಮ್ಮತ ವಿಚಾರಣೆ ನಡೆಯಲು ಅನುವು ಮಾಡಲು ಈ ಪ್ರಕರಣದಿಂದ ಹಿಂದಕ್ಕೆ ಸರಿಯುವಂತೆ ನ್ಯಾಯಾಧೀಶರಿಗೆ ತಿಳಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸಿರುವ ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಈ ಹೇಳಿಕೆಯು ಸಶಸ್ತ್ರಪಡೆಗಳ ನೈತಿಕ ಸ್ಥೈರ್ಯಕ್ಕೆ ಧಕ್ಕೆ ತಂದಿದೆ ಎಂದು ತಿಳಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಬಂಡುಕೋರರಿಗಿಂತ ಹೆಚ್ಚು ಭದ್ರತಾ ಸಿಬ್ಬಂದಿ ಸಾವನ್ನಪ್ಪುತ್ತಾರೆ.
ಹಾಗಾಗಿ ಅವರ ಮನಸ್ಸಿನಲ್ಲಿ ಭಯವಿದೆ. ನ್ಯಾಯಾಲಯಗಳೂ ತಪ್ಪು ಮಾಡುತ್ತವೆ ಎಂದು ಅಟರ್ನಿ ಜನರಲ್ ತಿಳಿಸಿದ್ದಾರೆ. ಈ ಹೇಳಿಕೆಯು ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ದೋಷಾರೋಪ ಪಟ್ಟಿಯ ವಿಷಯದಲ್ಲಿ ಸಿಬಿಐ ನಿರ್ದೇಶಕರಿಗೆ ಸ್ಪಂದನೆಯಾಗಿತ್ತು ಅಷ್ಟೇ ಎಂದು ನ್ಯಾಯಪೀಠ ಸ್ಪಷ್ಟೀಕರಣ ನೀಡಿದೆ.





