ಕೆ.ಸಿ.ವ್ಯಾಲಿ ಯೋಜನೆ: ಸಂಸ್ಕರಿತ ತ್ಯಾಜ್ಯ ನೀರು ಹರಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಸೆ.28: ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ (ಕೋಲಾರ-ಚಲ್ಲಘಟ್ಟ) ವ್ಯಾಲಿಯ ಸಂಸ್ಕರಿತ ತ್ಯಾಜ್ಯ ನೀರು ಹರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಈ ಸಂಬಂಧ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಆದೇಶಿಸಿದೆ. ಈ ಮೊದಲು ನೀರು ಹರಿಸದಂತೆ ನಿರ್ಬಂಧ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾಯಪೀಠ ಇದೇ ವೇಳೆ ತೆರವುಗೊಳಿಸಿತು.
ಸರಕಾರ ಅಂತರ್ಜಲದ ಪರೀಕ್ಷೆ ನಡೆಸಿಲ್ಲ. ಮೇಲ್ಮೈ ನೀರಿನ ಪರೀಕ್ಷೆ ಮಾಡಿ ಕೋರ್ಟ್‌ಗೆ ವರದಿ ನೀಡಿದೆ ಎಂದು ನಿನ್ನೆಯಷ್ಟೇ ಬಲವಾಗಿ ಆಕ್ಷೇಪಿಸಿದ್ದ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್, ಶುಕ್ರವಾರ ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ) ತಜ್ಞರಿಂದ ಪರೀಕ್ಷಿಸಿದ ನೀರಿನ ಗುಣಮಟ್ಟದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವರದಿಯ ದಿನಾಂಕ ಗಮನಿಸಿದ ನ್ಯಾಯಪೀಠ, ಇದು ಹಳೆಯದು. ಸರಕಾರ ಇತ್ತೀಚಿನ ವರದಿಗಳಲ್ಲಿ ನೀರಿನ ಶುದ್ಧತೆ ಕಾಪಾಡಿಕೊಂಡು ಹೋಗುತ್ತಿರುವ ಬಗ್ಗೆ ಕ್ರಮ ಕೈಗೊಂಡಿದೆ. ಸರಕಾರದ ಮಾತಿನ ಮೇಲೆ ನಂಬಿಕೆ ಇರಿಸಿ ನೀರು ಹರಿಸಲು ಈ ನಿರ್ದೇಶನ ನೀಡಲಾಗುತ್ತಿದೆ ಎಂದು ಹೇಳಿತು. ಗುಣಮಟ್ಟ ಕಾಪಾಡಿಕೊಳ್ಳಲು ನಿಗಾ ವಹಿಸಿ. ಈ ಕುರಿತು 15 ದಿನಗಳ ಬಳಿಕ ಕೋರ್ಟ್‌ಗೆ ವರದಿ ಸಲ್ಲಿಸಿ ಎಂದು ಸರಕಾರಕ್ಕೆ ಸೂಚಿಸಿತು. ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.







