ಗುಂಪಿನಿಂದ ಥಳಿಸಿ ಹತ್ಯೆ: ದೂರದರ್ಶನ, ರೇಡಿಯೋದಲ್ಲಿ ಎಚ್ಚರಿಕೆ ಪ್ರಸಾರಕ್ಕೆ ಸೂಚನೆ

ಹೊಸದಿಲ್ಲಿ, ಎ. 27: ಗುಂಪು ಥಳಿಸಿ ಹತ್ಯೆಗೈಯುವುದರ ಪರಿಣಾಮದ ಬಗ್ಗೆ ಜನರನ್ನು ಎಚ್ಚರಿಸಲು ತಮ್ಮ ಮಾದ್ಯಮಗಳಲ್ಲಿ ಸಂದೇಶ ರವಾನಿಸಿ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋಗೆ ನಿರ್ದೇಶನ ನೀಡಿದೆ. ಗುಂಪು ಥಳಿಸಿ ಹತ್ಯೆಗೈಯುವುದರಿಂದ ಕಾನೂನಿನ ಅಡಿಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ದೂರದರ್ಶನದಲ್ಲಿ ಸ್ಕ್ರೋಲ್ ಹಾಗೂ ರೇಡಿಯೋದಲ್ಲಿ ಸಂದೇಶಗಳನ್ನು ಪ್ರಸಾರ ಮಾಡುವಂತೆ ಆದೇಶ ಹೇಳಿದೆ.
‘‘ಇದು ಡಿಡಿ ಹಾಗೂ ಏರ್‌ಗೆ ನಿರ್ದೇಶನ. ಗುಂಪು ಹತ್ಯೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ಸಂದೇಶಗಳನ್ನು ಪ್ರಸಾರ ಮಾಡುವಂತೆ ಖಾಸಗಿ ಚಾನೆಲ್‌ಗಳಲ್ಲಿ ಮನವಿ ಮಾಡಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಪಿನಿಂದ ಹಾಗೂ ನಕಲಿ ಗೋರಕ್ಷಕರಿಂದ ಥಳಿಸಿ ಹತ್ಯೆ ಘಟನೆಗಳನ್ನು ತಡೆಯಲು ನಿರ್ದೇಶನಗಳನ್ನು ಅನುಸರಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೆಪ್ಟಂಪರ್ 24ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಈ ನಿರ್ದೇಶನ ನೀಡಿದೆ.





