ಮೈಸೂರು ದಸರಾ ಮಹೋತ್ಸವ ಹಿನ್ನಲೆ: ಸೆ.29, 30 ರಂದು ಗಾಳಿಪಟ ಉತ್ಸವ

ಮೈಸೂರು,ಸೆ.28: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವಹಿಕಲ್ಸ್ ಆಫ್ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ ಸೆ.29 ಮತ್ತು 30ರಂದು ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದ್ದು, ಸೆ.30 ರಿಂದ ವಿಂಟೇಜ್ ಕಾರುಗಳ ಉತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಗಾಳಿಪಟಗಳು ಪಾಲ್ಗೊಳ್ಳಲಿವೆ. ಮುಂಬೈ, ಅಹಮದಾಬಾದ್, ಸೂರತ್, ಹೈದ್ರಾಬಾದ್, ಮಂಗಳೂರು ಸೇರಿದಂತೆ ವಿವಿಧೆಡೆಗಳಿಂದ ವೃತ್ತಿನಿರತ ಕೈಟ್ ಫ್ಲೇಯರ್ಸ್ ಆಗಮಿಸಲಿದ್ದಾರೆ. ಶನಿವಾರ ಸಂಜೆ 4ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಎರಡು ದಿನಗಳ ಕಾಲ ಗಾಳಿಪಟ ಉತ್ಸವ ನಡೆಯಲಿದ್ದು, ಮಕ್ಕಳಿಗೆ ಗಾಳಿಪಟದ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಸುತ್ತಮುತ್ತಲಿನ ಶಾಲಾಕಾಲೇಜಗಳ ಮಕ್ಕಳು ಹಾಗೂ ಸಾರ್ವಜನಿಕರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ-2018ರ ಅಂಗವಾಗಿ ಸೆ.30ರಿಂದ ಮೈಸೂರಿನಲ್ಲಿ ವಿಂಟೇಜ್ ಕಾರ್ ಉತ್ಸವ ಕೂಡ ನಡೆಯಲಿದೆ. ಸೆ.30ರಂದು ಬೆಳಿಗ್ಗೆ 8ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈ ರ್ಯಾಲಿಗೆ ವಿಧಾನಸೌಧದ ಮುಂಭಾಗ ಚಾಲನೆ ನೀಡಲಿದ್ದಾರೆ. ವಿಂಟೇಜ್ ಕಾರ್ ಉತ್ಸವ ಸೆ.30ರಂದು ಸಂಜೆ 4.15ರಿಂದ ಮೈಸೂರಿನ ಲಲಿತ್ ಮಹಲ್ ನಲ್ಲಿ ಪ್ರಾರಂಭವಾಗಲಿದೆ. 50 ವಿಂಟೇಜ್ ಕಾರ್ ಗಳು ಮೈಸೂರು ನಗರವನ್ನು ಪ್ರದಕ್ಷಿಣೆ ಹಾಕಲಿವೆ. ವಿಂಟೇಜ್ ಕಾರುಗಳು ಸೆ.30ರ ಸಂಜೆ 4.15 ರಿಂದ ಮೈಸೂರಿನ ವಿವಿಧ ಪ್ರಮುಖ ಪಾರಂಪರಿಕ ಕಟ್ಟಡ, ಹೋಟೆಲ್ ಲಲಿತ್ ಮಹಲ್, ಅರಮನೆಯಿಂದ ಪ್ರಾರಂಭವಾಗಿ ಮಾಲ್ ಆಫ್ ಮೈಸೂರು, ಜೆಎಸ್ ಎಸ್ ಆಸ್ಪತ್ರೆ, ಆರ್.ಟಿ.ಓ ವೃತ್ತದ ಮೂಲಕ ಎಡಕ್ಕೆ ತಿರುವು ಪಡೆದು ಅದ್ವೈತ್ ಹುಂಡೈ ಷೋರೂಮ್ ಬಳಿ ಹತ್ತು ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅದ್ವೈತ್ ಹುಂಡೈ ಷೋರೂಮ್ ನಿಂದ ಆರ್ ಟಿ ಓವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ನಗರದ ಕೋರ್ಟ್ ಮುಂಭಾಗದಿಂದ ಬಂದು ಬಲ ತಿರುವು ಪಡೆದುಕೊಂಡು ಮೈಸೂರು ವಿವಿ ಕ್ರಾಫರ್ಡ್ ಹಾಲ್ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ಮಾರ್ಗವಾಗಿ ಬಲ ತಿರುವು ಪಡೆದು ಜಿಲ್ಲಾಡಳಿತ ಕಚೇರಿ ಮುಂಭಾಗದಿಂದ ಮೆಟ್ರೋಪೋಲ್, ವೃತ್ತ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯಿಂದ ಬಲ ತಿರುವು ಪಡೆದುಕೊಂಡು ಕೆ.ಆರ್.ವೃತ್ತ, ಟೌನ್ ಹಾಲ್ ಮಾರ್ಗವಾಗಿ ಯೂಟರ್ನ್ ಪಡೆದುಕೊಂಡು ಹಾರ್ಡಿಂಜ್ ವೃತ್ತದ ಮೂಲಕ ಜೆಎಸ್ ಎಸ್ ಮಹಾವಿದ್ಯಾಪೀಠದ ಮಾರ್ಗದಲ್ಲಿ ತಿರುವು ಪಡೆದುಕೊಂಡು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಮೈಸೂರು ಅರಮನೆಯನ್ನು ಸಂಜೆ 5.45ರ ವೇಳೆಗೆ ಪ್ರವೇಶಿಸಲಿದೆ.
ಎಲ್ಲಾ 50 ವಿಂಟೇಜ್ ಕಾರ್ ಗಳನ್ನು ಅರಮನೆ ಒಳಗೆ ಕುದುರೆ ಲಾಳಾಕೃತಿಯಲ್ಲಿ ನಿಲ್ಲಿಸಲಾಗುತ್ತದೆ. ಅರಮನೆಗೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ನಂತರ ರಾತ್ರಿ ಸುಮಾರು 7.30ಕ್ಕೆ ಲಲಿತ್ ಮಹಲ್ ಮೈದಾನಕ್ಕೆ ಎಲ್ಲಾ ವಿಂಟೇಜ್ ಕಾರುಗಳು ಹಿಂದಿರುಗಲಿವೆ. ಅಕ್ಟೋಬರ್ 1ರಂದು 12ವಿಂಟೇಜ್ ಕಾರುಗಳು ಲಲಿತ್ ಮಹಲ್ ಅರಮನೆಯಿಂದ ಬೆಳಿಗ್ಗೆ 7.15ಕ್ಕೆ ಹೊರಟು ಮೈಸೂರು ಅರಮನೆ ಪ್ರವೇಶಿಸುತ್ತವೆ. ಮೈಸೂರು ಅರಮನೆಯಿಂದ ಕೆ.ಆರ್.ವೃತ್ತದ ಕಡೆಗೆ 6 ವಿಂಟೇಜ್ ಕಾರುಗಳು ಆನೆಗಳ ಮೆರವಣಿಗೆ ಮುಂದೆ ಮತ್ತು 6 ವಿಂಟೇಜ್ ಕಾರುಗಳು ಆನೆಗಳ ಮೆರವಣಿಗೆಯ ಹಿಂದೆ ಸಾಗಲಿವೆ. ಮೆರವಣಿಗೆ ಮುಗಿದ ನಂತರ ಎಲ್ಲಾ 12 ವಿಂಟೇಜ್ ಕಾರ್ ಗಳನ್ನು ಲಲಿತ್ ಮಹಲ್ ಅರಮನೆಗೆ ಹಿಂದಿರುಗಿಸಲಾಗುತ್ತದೆ.
ಅಕ್ಟೋಬರ್ 1ರಂದು ಬೆಳಗ್ಗೆ 9ಕ್ಕೆ ಎಲ್ಲಾ ವಿಂಟೇಜ್ ಕಾರುಗಳು ಚಾಮುಂಡಿ ಬೆಟ್ಟಕ್ಕೆ ತೆರಳಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು ಲಲಿತ್ ಮಹಲ್ ಗೆ ವಾಪಸ್ಸು ಬರಲಿದೆ. ಇತಿಹಾಸದ ಪುಟ ಸೇರುತ್ತಿರುವ ವಿಂಟೇಜ್ ಕಾರ್ ಉತ್ಸವವನ್ನು ಸಾರ್ವಜನಿಕರು ಕಣ್ತುಂಬಿಸಿಕೊಳ್ಳಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್, ವಾರ್ತಾಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.







