ಚುನಾವಣೆಗೆ ಸ್ಪರ್ಧಿಸಲು ಹೀಗೊಂದು ‘ಜನಮತ ಸಂಗ್ರಹ’ ಅಭಿಯಾನ
ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು, ಸೆ.28: ಮಂಗಳೂರು ಮಹಾನಗರ ಪಾಲಿಕೆಯ 39ನೆ ಫಳ್ನೀರ್ ವಾರ್ಡ್‌ನಿಂದ 2019ರಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯೊಬ್ಬರು ‘ಜನಮತ’ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ. ಅದಕ್ಕಾಗಿ ವಾರ್ಡ್‌ನ ಹಲವು ಕಡೆ ಬ್ಯಾನರ್ ಅಳವಡಿಸಿ ಮತ್ತು ಕರಪತ್ರವನ್ನು ಹಂಚಿ ‘ಫೇಸ್‌ಬುಕ್, ಅಂತರ್ಜಾಲ, ಎಸ್ಸೆಮ್ಮೆಎಸ್’ ಮೂಲಕ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯಾಗಿರುವ ಉಜ್ಜೋಡಿ ನಿವಾಸಿ ಸಿಲ್ವಿಯಾ ಸಲ್ದಾನಾ ಈ ಮೂಲಕ ತಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೇ, ಬೇಡವೇ ಎಂಬ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದವರು. ಇವರು ಹಾಕಲಾದ ಬ್ಯಾನರ್‌ನಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ಎಚ್.ಡಿ.ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋ ಇದೆ. ಆ ಮೂಲಕ ತಾನು ಪಕ್ಷೇತರರಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈಗಾಗಲೆ ತನ್ನನ್ನು ರಾಜಕೀಯ ಪಕ್ಷದ ಮುಖಂಡರು ಸಂಪರ್ಕಿಸಿದ್ದಾರೆ. ಸದ್ಯ ನಾನು ಯಾವ ತೀರ್ಮಾನವನ್ನು ಕೈಗೊಂಡಿಲ್ಲ. ರಾಜ್ಯ ಸರಕಾರದ ಭವಿಷ್ಯವನ್ನು ಆಧರಿಸಿ ತೀರ್ಮಾನಕ್ಕೆ ಬರುವುದಾಗಿ ಸಿಲ್ವಿಯಾ ಹೇಳಿಕೊಂಡಿದ್ದಾರೆ. ಅಂದರೆ ಕೊನೆಯ ಕ್ಷಣದಲ್ಲಿ ಇವರು ರಾಜಕೀಯ ಪಕ್ಷವೊಂದರ ಟಿಕೆಟ್ ಪಡೆದು ಸ್ಪರ್ಧಿಸಿದರೂ ಅಚ್ಚರಿ ಇಲ್ಲ.
ಅಂದಹಾಗೆ ಸಿಲ್ವಿಯಾ ಇಂಥದ್ದೊಂದು ಅಭಿಯಾನದ ಮೂಲಕ ಚುನಾವಣೆಯ ಕಣಕ್ಕಿಳಿಯಲು ಕಾರಣವೂ ಇದೆ. ಸಿಲ್ವಿಯಾ ಅವರೇ ಹೇಳುವಂತೆ ‘ನಾನು ಖಾಸಗಿ ಆಸ್ಪತ್ರೆಯ ಉದ್ಯೋಗಿ. ಉಜ್ಜೋಡಿಯಲ್ಲಿರುವ ನನ್ನ ಜಮೀನು ವಿವಾದದಲ್ಲಿದೆ. ಅದನ್ನು ಮರಳಿ ಪಡೆಯಲು ಕಳೆದ 25 ವರ್ಷದಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ. ಅದೇ ಕಾರಣಕ್ಕೆ ನಾನು ಹಲ್ಲೆಗೂ ಒಳಗಾದೆ. ಕೇಳಿದಲ್ಲೆಲ್ಲಾ ನ್ಯಾಯ ಮರೀಚಿಕೆಯಾಯಿತು. ರಾಜಕೀಯ ಬಲವಿದ್ದರೆ ಇಂತಹ ದೌರ್ಜನ್ಯವನ್ನು ಪಡೆಯಬಹುದೇನೋ. ಅದಕ್ಕಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಿರುವೆ. ಅದಕ್ಕೂ ಮುನ್ನ ಜನರ ಅಭಿಪ್ರಾಯ ಮುಖ್ಯ. ಹಾಗಾಗಿ ಕೆಲವು ಕಡೆ ಬ್ಯಾನರ್ ಅಳವಡಿಸಿದ್ದೇನೆ, ಕರಪತ್ರ ಹಂಚಿದ್ದೇನೆ. ಜನರ ಅಭಿಪ್ರಾಯದ ಬಳಿಕ ಸೂಕ್ತ ನಿರ್ಧಾರ ತಾಳುವೆನು’.
ಸೆ.23ರಿಂದ ಆರಂಭಗೊಂಡಿರುವ ಈ ಅಭಿಯಾನ ಅಕ್ಟೋಬರ್ 10ಕ್ಕೆ ಮುಗಿಯಲಿದೆ. ಅದರೊಳಗೆ ಅಭಿಪ್ರಾಯ ನೀಡುವಂತೆ ಮನವಿ ಮಾಡಿರುವ ಸಿಲ್ವಿಯಾರಿಗೆ ಈಗಾಗಲೆ ವಾರ್ಡ್ ವ್ಯಾಪ್ತಿಯ ಕೆಲವು ಮಂದಿ ಸ್ಪಂದಿಸಿದ್ದಾರೆ. ‘ನನಗೆ ರಾಜಕೀಯದಲ್ಲಿ ಮೊದಲೇ ಆಸಕ್ತಿ ಇತ್ತು. ಆದರೆ, ನೇರ ರಾಜಕೀಯಕ್ಕೆ ಇಳಿಯುವ ಮುನ್ನ ಜನರ ಅಭಿಪ್ರಾಯ ಪಡೆದರೆ ಚೆನ್ನ. ನನ್ನ ಕಳಕಳಿಗೆ ಪ್ರಮುಖ ರಾಜಕೀಯ ಪಕ್ಷಗಳು ಸ್ಪಂದಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಪಕ್ಷೇತರನಾದರೂ ಸರಿ, ಕಣಕ್ಕಿಳಿಯುವೆ’ ಎಂದು ಸಿಲ್ವಿಯಾ ಸಲ್ದಾನಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.







