ಸೆ. 29-30: ಜಪಮಾಲ ಹಾಗೂ ಕೊಂಕಣಿ ಧಾರ್ಮಿಕ ಸಾಹಿತ್ಯ ಪ್ರದರ್ಶನ
ಮಂಗಳೂರು, ಸೆ. 28: ಮಂಗಳೂರು ಕ್ರೈಸ್ತ ಧರ್ಮಪ್ರಾಂತ ವ್ಯಾಪ್ತಿಯಲ್ಲಿ ಮಂಗಳೂರಿನ ರೊಝಾರಿಯೊ ಪ್ರಧಾನ ದೇವಾಲಯವು ಸ್ಥಾಪನೆಗೊಂಡು 2018ಕ್ಕೆ 450 ವರ್ಷಗಳು ಸಂದಿವೆ. ಈ ಪ್ರಧಾನ ದೇವಾಲಯವು ರೋಜರಿ ಮಾತೆ (ಜಪಮಾಲಾ ಮಾತೆ) ಸಮರ್ಪಿತವಾಗಿದ್ದು, ಸರ್ವದೇವಾಲಯಗಳ ತಾಯಿ (ಆರಂಭಿಕ ದೇವಾಲಯ) ಎಂದು ಕರೆಯಲ್ಪಡುತ್ತಿದೆ. ಆ ಹಿನ್ನೆಲೆಯಲ್ಲಿ ಧರ್ಮಪ್ರಾಂತವು ಈ ವರ್ಷವನ್ನು ‘ಜಪಮಾಲಾ ವರುಷ’ ಎಂದು ಘೋಷಿಸಿದೆ. ಅದರಂತೆ ಅನೇಕ ಕಾರ್ಯಕ್ರಮಗಳು ಜರುಗಿವೆ.
ಜಪಮಾಲಾ ವರುಷ ಆಚರಣೆ ಮಾಡುವ ಈ ಸಂದರ್ಭದಲ್ಲಿ ಜಪಮಾಲಾ ದೇವಾಲಯವಾದ ರೊಜಾರಿಯೊ ದೇವಾಲಯವು ಪ್ರಾಧಾನ್ಯತೆಯನ್ನು ಪಡೆಯು ತ್ತಿದೆ. ಅದರೊಂದಿಗೆ ಅದು ತನ್ನ ಸ್ಥಾಪನೆಯ 450 ವರ್ಷದ ಆಚರಣೆಯನ್ನೂ ಮಾಡುತ್ತದೆ.
140ನೆಯ ಜಪಮಾಲಾ ಪ್ರದರ್ಶನ: ಜಪಮಾಲಾ ವರ್ಷದ ಆಚರಣ ಸಂಭ್ರಮದ ಪ್ರಯುಕ್ತ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಹೆಸರು ದಾಖಲಿಸಿದ ಸಾಬೂ ಕೈತಾರ್ ಮತ್ತು ಅವರ ಪಂಗಡದಿಂದ ಜಪಮಾಲಾ ಪ್ರದರ್ಶನ (ರೋಸರಿ ಎಕ್ಸಿಬಿಷನ್) ಸೆ.29, 30ರಂದು ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ 50,000ಕ್ಕಿಂತಲೂ ಮಿಗಿಲಾದ ಜಪಸರ ಮಾಲೆಗಳು, ಸಂತ ಪದವಿಗೇರಿದ ಅನೇಕ ಸಂತರು ಪ್ರಾರ್ಥನೆಗಾಗಿ ಉಪಯೋಗಿಸಿದ ಜಪಮಾಲಾ ಸರಗಳು, ಕನ್ಯಾ ಮರಿಯಮ್ಮನವರ 500ಕ್ಕಿಂತಲೂ ಹೆಚ್ಚು ಮೂರ್ತಿಗಳ ಪ್ರದರ್ಶನ ಹಾಗೂ 100ಕ್ಕೂ ಹೆಚ್ಚು ಮರಿಯಮ್ಮನವರ ಚಿತ್ರಗಳ ಪ್ರದರ್ಶನವು ವಿಶೇಷ ಆಕರ್ಷಣೆಯಾಗಲಿದೆ. ಇದು ರೊಜಾರೊಯೋದಲ್ಲಿ ನಡೆಯುವ 2ನೆ ಪ್ರದರ್ಶನವಾಗಿದೆ. ಮಿಲಾಗ್ರಿಸ್ ಮತ್ತು ರೊಜಾರಿಯೊ ಚರ್ಚ್ ಜಂಟಿಯಾಗಿ ಇದನ್ನು ಏರ್ಪಡಿಸಿದೆ.
ಕೊಂಕಣಿ ಧಾರ್ಮಿಕ ಸಾಹಿತ್ಯ ಪ್ರದರ್ಶನ: ಜಪ ಸರಮಾಲಾ ವರ್ಷದ ಪ್ರಯುಕ್ತ ಏರ್ಪಡಿಸುವ ಜಪಸರ ಮಾಲಾ ಪ್ರದರ್ಶನದ ಜೊತೆಗೆ ಸೆ.30ರ ಸಂಜೆ 4:30ರಿಂದ ಮಿಲಾಗ್ರಿಸ್ ಸೆನೆಟ್ ಹಾಲ್‌ನಲ್ಲಿ ಕೊಂಕಣಿ ಧಾರ್ಮಿಕ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ‘ಕೊಂಕಣಿ ಧಾರ್ಮಿಕ ಸಾಹಿತ್ಯ ಮತ್ತು ಕಲೆಯಲ್ಲಿ ಕನ್ಯಾ ಮರಿಯಮ್ಮ’ ಎಂಬ ವಿಷಯದಲ್ಲಿ ಉಪನ್ಯಾಸ ಹಾಗೂ ವಿಚಾರ ನಿಮಯ ನಡೆಯಲಿದೆ.
ಮ್ಯಾಜಿಕ್ ಶೋ ಹಾಗೂ ಗುಮ್ಟಾಂ (ಗುಮ್ಮಟ್ ವಾದ್ಯ): ಸಮ್ಮೇಳನದಲ್ಲಿ ಗುಮ್ಟಾಂ ಪದ್ಯ ನಿಡ್ಡೋಡಿ ಪಂಗಡದಿಂದ ಹಾಗೂ ವಂ. ಫಾ. ಐವನ್ ಮಾಡ್ತಾ ಮತ್ತು ಕನ್ಯಾ ಮರಿಯಮ್ಮನವರ ಬಗ್ಗೆ ಮ್ಯಾಜಿಕ್ ಶೋ ನಡೆಯಲಿದೆ.
ಜಪಮಾಲಾ ಸರ ಪ್ರದರ್ಶನವನ್ನು ನಿವೃತ್ತ ಧರ್ಮಾಧ್ಯಕ್ಷ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಜೆ.ಆರ್. ಲೋಬೊ ಮತ್ತಿತರರು ಭಾಗವಹಿಸುವರು.
ಕೊಂಕಣಿ ಧಾರ್ಮಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಧರ್ಮಾಧ್ಯಕ್ಷ ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸುವರು. ಮುಖ್ಯ ಅತಿಥಿಗಳಾಗಿ ವಿದ್ವಾಂಸ ಡಾ. ಬಿ.ಎಸ್. ತಲ್ವಾಡಿ ಬೆಂಗಳೂರು, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ. ಫಾ. ಚೇತನ್ ಕಾಪುಜಿನ್ ಭಾಗವಹಿಸುವರು ಎಂದು ಕಾರ್ಯಕ್ರಮದ ಸಂಚಾಲಕ ವಂ. ಫಾ. ಜೆ.ಬಿ. ಕ್ರಾಸ್ತಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.







