ಗಾಂಜಾ ಸೇವನೆ ಆರೋಪ: ಯುವಕನ ಬಂಧನ
ಮಂಗಳೂರು, ಸೆ.28: ನಗರದ ಇಎಸ್‌ಐ ಆಸ್ಪತ್ರೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಕದ್ರಿ ನಿವಾಸಿ ನತಾಶ್ (35) ಬಂಧಿತ ಆರೋಪಿ.
ಶುಕ್ರವಾರ ಕದ್ರಿ ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಇಎಸ್‌ಐ ಆಸ್ಪತ್ರೆ ಬಳಿ ಯುವಕನೊಬ್ಬ ನಿಂತು ಸಿಗರೇಟು ಸೇದುತ್ತಿದ್ದು, ಪೊಲೀಸರು ಆತನ ಬಳಿ ಹೋದಾಗ ಸಿಗರೇಟನ್ನು ಬಿಸಾಡಿದ್ದಾನೆ. ಈ ಸಂದರ್ಭ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತೊದಲು ಮಾತನಾಡುತ್ತಿದ್ದು, ಸಿಗರೇಟಿನ ಜತೆ ಗಾಂಜಾ ಸೇವನೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆ ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗಲೂ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈತನ ವಿರುದ್ಧ ಮಾದಕ ದ್ರವ್ಯ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





