ನರೇಗಾ ಅಡಿಯಲ್ಲಿ ಅತಿವೃಷ್ಟಿ ಹಾನಿ ಪ್ರದೇಶಗಳಲ್ಲಿ ಪರಿಹಾರ ಯೋಜನೆ ಕೈಗೊಳ್ಳಿ: ದೇವೇಗೌಡ ಸೂಚನೆ
ಚಿಕ್ಕಮಗಳೂರು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

ಚಿಕ್ಕಮಗಳೂರು, ಸೆ.28: ಅತೀವೃಷ್ಟಿಯಿಂದಾಗಿ ಜಿಲ್ಲೆಯಲ್ಲಾಗಿರುವ ಆಸ್ತಿ ಹಾನಿ ಸಂಬಂಧ ನರೇಗಾ ಯೋಜನೆಯಡಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದ್ದು, ಈ ಬಗ್ಗೆ ಗ್ರಾಪಂ ಜನಪ್ರತಿನಿಧಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೇ ಅಧಿಕಾರಿಗಳು ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ)ಯಲ್ಲಿ ಮಾತನಾಡಿದ ಅವರು, ಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಧಿಕಾರಿಗಳು ಅವುಗಳನ್ನು ಸಮರ್ಪವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕಯೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಇತ್ತೀಚೆಗೆ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಕೇಂದ್ರ ಸರಕಾರದ ನರೇಗಾ ಯೋಜನೆಯಡಿಯಲ್ಲಿ ಕೆಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಯಾವ ಕಾಮಗಾರಿಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಬಹುದು ಎಂಬುದರ ಮಾಹಿತಿಯೇ ಇರುವುದಿಲ್ಲ. ಆದ್ದರಿಂದ ನರೇಗಾ ಯೋಜನೆಯ ಒಂಬೂಡ್ಸ್ ಮನ್‍ಗಳು ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಮೂಡಿಗೆರೆ ತಾಲೂಕು ಪಂಚಾಯತ್ ಅಧ್ಯಕ್ಷ ರತನ್ ಮಾತನಾಡಿ, ನರೇಗಾ ಯೋಜನೆಯ ಸೋಷಿಯಲ್ ಆಡಿಟರ್‍ಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಸೋಷಿಯಲ್ ಆಡಿಟ್ ತಾಲೂಕು ಅಥವಾ ಜಿ.ಪಂ. ಅಧೀನಕ್ಕೆ ಬಾರದಿರುವುದರಿಂದ ದಬ್ಬಾಳಿಕೆ ಮಾಡಲಾಗುತ್ತಿದೆ. ಆಡಿಟ್ ರಾಜ್ಯ ಸರಕಾರದ ಸಮಿತಿ ವ್ಯಾಪ್ತಿಗೆ ಬಂದರೆ ಕಷ್ಟವಾಗುತ್ತದೆ. ಆದ್ದರಿಂದ ತಾಲೂಕು ಅಥವಾ ಜಿ.ಪಂ. ಕಂಟ್ರೋಲ್‍ಗೆ ತರಬೇಕೆಂಬ ಮನವಿಯನ್ನು ಸಭೆಯ ಮುಂದಿಟ್ಟರು.
ಸಂಸದ ಎಚ್.ಡಿ.ದೇವೇಗೌಡ ಮಾತನಾಡಿ, ಮಳೆಯಿಂದ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಕೇಂದ್ರ ಸರಕಾರದ ಯೋಜನೆಗಳ ಮೂಲಕ ಆವಶ್ಯಕ ಕಾಮಗಾರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು. ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ಮರಳು ಸಂಗ್ರಹವಾಗಿರುವುದರಿಂದ ಮರಳು ತೆರವು ಮಾಡಲು ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಸಭೆಗೆ ನೀಡಿರುವ ಅಜೆಂಡದಲ್ಲಿ ಕೇಂದ್ರ ಸರಕಾರದ ಯೋಜನೆಗಳಾದ ಉಜ್ವಲ ಯೋಜನೆ, ಮುದ್ರಾ ಯೋಜನೆ, ಪಿಂಚಣಿ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಡಿಜಿಟಲ್ ಇಂಡಿಯಾ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿಲ್ಲ, ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಯೋಜನೆ ಅನುಷ್ಠಾನ ಪ್ರಗತಿಯ ಬಗ್ಗೆ ಮಾಹಿತೆಯೇ ಇಲ್ಲದಿದ್ದರೇ ಚರ್ಚೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸರಕಾರದ ಮತ್ತು ಎಂ.ಪಿ. ಗ್ರಾಂಟ್‍ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಚ್.ಡಿ.ದೇವೇಗೌಡ ಮಾತನಾಡಿ, ಸಭೆಯ ಅಜೆಂಡಾದಲ್ಲಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಮುಂದೇ ಈ ರೀತಿ ಆಗಬಾರದು ಎಂದು ಎಚ್ಚರಿಸಿದರು.
ಮೂಡಿಗೆರೆ ತಾಲೂಕು ಪಂಚಾಯತ್ ಅಧ್ಯಕ್ಷ ಸಿ.ರತನ್ ಮಾತನಾಡಿ, ಸರಕಾರಿ ಆಸ್ಪತ್ರೆಗಳಲ್ಲಿರುವ ಜನೌಷಧ ಕೇಂದ್ರಗಳು ಬೆಳಗ್ಗೆ 8ರಿಂದ ಸಂಜೆ 5ಗಂಟೆಯ ವರೆಗೂ ಮಾತ್ರ ತೆರೆದಿರುತ್ತವೆ. ಸೀಮಿತ ಅವಧಿಯಲ್ಲಿ ಜನೌಷಧ ಕೇಂದ್ರಗಳು ತೆರೆದಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಜನೌಷಧ ಕೇಂದ್ರಗಳನ್ನು 24ಗಂಟೆಯೂ ತೆರೆಯುವಂತೆ ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಜನೌಷಧ ಕೇಂದ್ರಗಳಲ್ಲಿ ಡಯಾಬಿಟಿಸ್ ಮತ್ತು ಬಿಪಿಗೆ ಸಂಬಂಧಿಸಿದ ಔಷಧಗಳು ಸಿಗುವುದಿಲ್ಲ. ಸಾರ್ವಜನಿಕರಿಗೆ ಅಗತ್ಯವಾಗ ಔಷಧಗಳು ಸಿಗದಿದ್ದರೇನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದಕ್ಕೆ ಸಂಬಂಧಿಸಿದ ಅಧಿಕಾರಿ ಮಾತನಾಡಿ, ಜನೌಷಧ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿ ಕೊರತೆಯಿಂದ ಬೆಳಗ್ಗೆ 8ರಿಂದ ಸಂಜೆ 5ರವರೆಗೂ ತೆರೆದಿರುತ್ತದೆ. ಮುಂದಿನ ದಿನಗಳಲ್ಲಿ 24ಗಂಟೆ ಜನೌಷಧ ಕೇಂದ್ರಗಳು ತೆರೆದಿರುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗುವ ಔಷಧ ದೊರಕುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಶೌಚಾಲಯಗಳ ನಿರ್ಮಾಣಕ್ಕೆ ಮರಳಿನ ಕೊರತೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಸದ್ಯದಲ್ಲಿಯೇ ಟೆಂಡರ್ ಮರಳು ಸರಬರಾಜಿಗೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವಿಲೇವಾರಿಗೆ ವಾಹನ ಸೌಲಭ್ಯ ಕಲ್ಪಿಸುವಂತೆ ಮೂಡಿಗೆರೆ ತಾ.ಪಂ. ಅಧ್ಯಕ್ಷ ಸಿ.ರತನ್ ಸಭೆಗೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಿ.ಟಿ.ರವಿ, ಹೋಮ್ ಸ್ಟೇ ಮತ್ತು ರೆಸಾರ್ಟ್‍ಗಳಲ್ಲಿ ಉಪಯೋಗಿಸುವ ನೀರಿನ ಬಾಟಲ್, ಮದ್ಯದ ಬಾಟಲ್‍ಗಳನ್ನು ರಸ್ತೆಬದಿಯಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದಾಗ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಸದ್ಯದಲ್ಲಿಯೇ ಹೋಮ್ ಸ್ಟೇ ಮತ್ತು ರೆಸಾರ್ಟ್ ಮಾಲಕರ ಸಭೆ ಕರೆದು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಮಣ್ಣು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವಂತೆ ಹಾಗೂ ಬಾಕಿ ಇರುವ ಕೆಲಸವನ್ನು ಮೆಸ್ಕಾಂ ಇಲಾಖೆ ಶೀಘ್ರವೇ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಧಿಖಾಧಿಕಾರಿಗಳಿಗೆ ಸೂಚಿಸಿದರು.
ಉಜ್ವಲ ಯೋಜನೆ ಅಡಿಯಲ್ಲಿ ಎಷ್ಟು ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಕೆ ಸಂಬಂಧಿಸಿದ ಅಧಿಕಾರಿಗೆ ಪ್ರಶ್ನಿಸಿದರು. ಇಲಾಖಾಧಿಕಾರಿ ಮಾತನಾಡಿ, 10,331 ಮನೆಗಳಿಗೆ ಗ್ಯಾಸ್ ಕಲೆಕ್ಷನ್ ನೀಡಲಾಗಿದೆ. 3514 ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಬೇಕೆಂದು ಮಾಹಿತಿ ನೀಡಿದರು. 21,347 ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದು ಎಜೆಸ್ಸಿಯವರು ಮಾಹಿತಿ ನೀಡಿದ್ದಾರೆ ಎಂದು ಸಂಸದೆ ಶೋಭಾ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು.
ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಸುಜಾಯಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ತಾ.ಪಂ. ಅಧ್ಯಕ್ಷಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ದಿಶಾ ಸಭೆಯಲ್ಲಿ ಉಪಸ್ಥಿತರಿದ್ದರು.







