ನ.23 ರಿಂದ ಶಾರ್ಜಾದಲ್ಲಿ 2ನೇ ಆವೃತ್ತಿಯ ಟಿ-10 ಕ್ರಿಕೆಟ್ ಲೀಗ್
ಝಹೀರ್ ಖಾನ್, ಕ್ರಿಸ್ ಗೇಲ್, ಲಸಿತ್ ಮಾಲಿಂಗ ಭಾಗಿ

ದುಬೈ, ಸೆ.28: ಶಾರ್ಜಾದಲ್ಲಿ ನ.23 ರಿಂದ ಡಿ.2ರ ತನಕ ನಡೆಯಲಿರುವ ಎರಡನೇ ಆವೃತ್ತಿಯ ಟಿ-10 ಲೀಗ್‌ನಲ್ಲಿ ವಿಶ್ವದ ಪ್ರಸಿದ್ಧ ಕ್ರಿಕೆಟಿಗರಾದ ಕ್ರಿಸ್ ಗೇಲ್, ಝಹೀರ್ ಖಾನ್, ಲಸಿತ್ ಮಾಲಿಂಗ, ಮೊರ್ನೆ ಮೊರ್ಕೆಲ್ ಹಾಗೂ ರಶೀದ್ ಖಾನ್ ಸಹಿತ ಹಲವರು ಭಾಗವಹಿಸಲಿದ್ದಾರೆ.
64 ಅಗ್ರ ಕ್ರಿಕೆಟಿಗರ ಗುಂಪಿನಲ್ಲಿರುವ ಆಟಗಾರರು 8 ತಂಡಗಳಲ್ಲಿ ಟಿ-10 ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಲೀಗ್ 10 ಓವರ್‌ಗಳ ಕ್ರಿಕೆಟ್ ಆಗಿದ್ದು ಟೂರ್ನಿಯು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
8 ತಂಡಗಳಾದ ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠ ಅರೇಬಿಯನ್ಸ್, ಬಂಗಾಳ ಟೈಗರ್ಸ್, ದಿ ಕರಾಚಿಯನ್ಸ್, ರಾಜ್‌ಪೂತ್ಸ್, ನಾರ್ಥರ್ನ್ ವಾರಿಯರ್ಸ್ ಹಾಗೂ ಪಾಖ್‌ಟೂನ್ಸ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಈ ವರ್ಷ ಕರಾಚಿಯನ್ಸ್ ಹಾಗೂ ನಾರ್ಥರ್ನ್ ವಾರಿಯರ್ಸ್ ತಂಡಗಳು ಹೊಸತಾಗಿ ಸೇರ್ಪಡೆಯಾಗಿವೆ.
ಕಳೆದ ವರ್ಷದ ಚಾಂಪಿಯನ್ ಕೇರಳ ಕಿಂಗ್ಸ್ ತಂಡ ಕ್ರಿಸ್ ಗೇಲ್, ಜುನೈದ್ ಖಾನ್, ಸಂದೀಪ್, ಟಾಮ್ ಕರನ್, ಫ್ಯಾಬಿಯನ್ ಅಲ್ಲೆನ್, ನಿರೊಶನ್ ಡಿಕ್ವೆಲ್ಲಾ, ಇಮ್ರಾನ್ ನಝೀರ್‌ರನ್ನು ಆಯ್ಕೆ ಮಾಡಿಕೊಂಡಿದೆ.
ಆಟಗಾರರಾದ ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್, ಲೂಕ್ ರಾಂಚಿ, ಮುಹಮ್ಮದ್ ಸಾಮಿ, ಝಹೀರ್ ಖಾನ್, ಉಮರ್ ಅಕ್ಮಲ್, ಟಾಮ್ ಮೂರ್ಸ್, ಅನ್ವರ್ ಅಲಿಯವರನ್ನು ಕಳೆದ ವರ್ಷದ ರನ್ನರ್ಸ್ ಅಪ್ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮರಾಠ ತಂಡಕ್ಕೆ ಅಫ್ಘಾನಿಸ್ತಾನದ ರಶೀದ್ ಖಾನ್ ನಾಯಕನಾಗಿ ಆಯ್ಕೆಯಾಗಿದ್ದು, ಈ ತಂಡದಲ್ಲಿ ಅಲೆಕ್ಸ್ ಹೇಲ್ಸ್, ಕರ್ಮಾನ್ ಅಕ್ಮಲ್, ಜೇಮ್ಸ್ ಫಾಕ್ನರ್, ಲಸಿತ್ ಮಾಲಿಂಗ, ಜೇಮ್ಸ್ ವಿನ್ಸಿ, ಬ್ರೆಂಡನ್ ಟೇಲರ್ ಸಹಿತ ಹಲವರಿದ್ದಾರೆ.
ಟಿ-10 ಲೀಗ್ ವಿಶ್ವದ ಮೊದಲ 10 ಓವರ್‌ಗಳ ಅಂತರ್‌ರಾಷ್ಟ್ರೀಯ ವೃತ್ತಿಪರ ಕ್ರಿಕೆಟ್ ಲೀಗ್ ಆಗಿದ್ದು, ಇದಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಮಾನ್ಯತೆಯಿದೆ. ಟಿ-10 ಲೀಗ್ 2017ರಲ್ಲಿ ಯುಎಇನಲ್ಲಿ ಉದಯವಾಗಿದೆ.







