"ಕೊಡಗು ಬ್ಲಾಕ್ ಕಾಂಗ್ರೆಸ್ ಘಟಕ ವಿಸರ್ಜನೆಗೆ ಕೆಪಿಸಿಸಿ ಆದೇಶ"
ಮಡಿಕೇರಿ ಸೆ.28 : ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಘಟಕಗಳನ್ನು ವಿಸರ್ಜಿಸಿ ನೂತನ ಸಮಿತಿಗಳನ್ನು ರಚಿಸುವಂತೆ ಕೆಪಿಸಿಸಿ ಆದೇಶ ಮಾಡಿರುವುದರಿಂದ ಸೆ.28 ರಂದೇ ಎಲ್ಲಾ ಘಟಕಗಳನ್ನು ವಿಸರ್ಜಿಸಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಮಾತ್ರ ಮುಂದುವರೆಯಲಿದ್ದು, ಉಳಿದ ಎಲ್ಲಾ ಘಟಕಗಳ ಪದಾಧಿಕಾರಿಗಳನ್ನು ಪಕ್ಷದ ಅಧಿಕಾರ ಸ್ಥಾನದಿಂದ ಮುಕ್ತಗೊಳಿಸಲಾಗಿದೆ ಎಂದರು. ಮುಂದಿನ 15 ದಿನಗಳಲ್ಲಿ ಪ್ರತಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ಅಧ್ಯಕ್ಷರು ಹಾಗೂ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೆಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಪಕ್ಷದ ಎಲ್ಲಾ ಘಟಕಗಳನ್ನು ಪ್ರಬಲಗೊಳಿಸುವ ಉದ್ದೇಶದಿಂದ ನೂತನ ಸಮಿತಿಗಳನ್ನು ರಚಿಸುವಂತೆ ಕೆಪಿಸಿಸಿ ಆದೇಶ ಮಾಡಿದ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಾರಿಗೆ ಬರುವಂತೆ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದೆ. ಮುಂದೆ ಹೊಸ ಸಮಿತಿಗಳನ್ನು ರಚಿಸುವ ಸಂದರ್ಭ ಇತ್ತೀಚೆಗೆ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಬೆಂಬಲಿಗರಿಗೂ ಸ್ಥಾನ ನೀಡಲಾಗುವುದೆಂದರು.