ಮಿದುಳನ್ನು ಖಾಲಿಯಾಗಿಸುವ ಬ್ರೇಯ್ನ್ ಫಾಗ್ ಬಗ್ಗೆ ನಿಮಗೆಷ್ಟು ಗೊತ್ತು....?
ನಿಮಗೆಂದಾದರೂ ಮಿದುಳು ಏಕಾಏಕಿ ಖಾಲಿಯಾಗಿ,ಬರೆಯುತ್ತಿರುವ ವಾಕ್ಯ ಅರ್ಧಕ್ಕೇ ನಿಂತು ಮುಂದಿನ ಶಬ್ದಗಳೇ ಹೊಳೆಯದಂತಹ ಅಥವಾ ಕೆಲವೊಮ್ಮೆ ಕೋಣೆಯನ್ನು ಪ್ರವೇಶಿಸಿದ ಬಳಿಕ ಅಲ್ಲಿಗೆ ಬಂದಿದ್ದ ಉದ್ದೇಶವೇ ಮರೆತುಹೋದ ಅನುಭವವಾಗಿದೆಯೇ? ಎಲ್ಲರಿಗೂ ಇಂತಹ ಅನುಭವ ಕನಿಷ್ಠ ಒಂದು ಬಾರಿಯಾದರೂ ಆಗಿರುತ್ತದೆ. ಇಂತಹ ಸ್ಥಿತಿಯನ್ನು ಬ್ರೇಯ್ನಿ ಫಾಗ್ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಮಿದುಳಿಗೆ ಮಂಜು ಕವಿದಂತಾಗಿರುತ್ತದೆ.
ಬ್ರೇಯ್ನ ಫಾಗ್ ಮನಸ್ಸಿಗೆ ಸಂಬಂಧಿಸಿದ ಲಕ್ಷಣವಾಗಿದೆ. ಅದು ಅನಾರೋಗ್ಯದ ಸಂಕೇತವಾಗಿರಬಹುದು ಅಥವಾ ಜೀವನಶೈಲಿಯು ಅದಕ್ಕೆ ಕಾರಣವಾಗಿರಬಹುದು. ಅದು ಜ್ಞಾಪಕ ಶಕ್ತಿ,ಲೆಕ್ಕ ಮಾಡುವ ಸಾಮರ್ಥ್ಯ,ದೃಷ್ಟಿ ಗೋಚರತೆ ಮತ್ತು ಗಾತ್ರದ ಅರಿವು,ಮಾಹಿತಿ ಸಂಸ್ಕರಣೆ,ಭಾಷೆಯನ್ನು ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇತ್ಯಾದಿಗಳು ಸೇರಿದಂತೆ ಮಿದುಳಿನ ವಿವಿಧ ಕಾರ್ಯ ನಿರ್ವಹಣೆಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಬ್ರೇಯ್ನ ಫಾಗ್ಗೆ ಕಾರಣಗಳು
►ನಿದ್ರೆಯ ಕೊರತೆ
ಸಾಕಷ್ಟು ನಿದ್ರೆಯಿಲ್ಲದಿರುವುದು ಬ್ರೇಯ್ನೆ ಫಾಗ್ವುಂಟಾಗಲು ಕಾರಣಗಳಲ್ಲೊಂದಾಗಿದೆ. ನಿದ್ರೆಯ ಕೊರತೆಯು ಪರಸ್ಪರ ಸಂವಹನ ನಡೆಸುವ ಮಿದುಳು ಕೋಶಗಳ ಕಾರ್ಯವನ್ನು ವ್ಯತ್ಯಯಗೊಳಿಸುತ್ತದೆ. ಇದು ತಾತ್ಕಾಲಿಕ ಮಾನಸಿಕ ಕುಸಿತವನ್ನುಂಟು ಮಾಡುತ್ತದೆ ಮತ್ತು ಜ್ಞಾಪಕ ಶಕ್ತಿಯನ್ನು ಕುಗ್ಗಿಸುತ್ತದೆ. ಕೆಲವೇ ಗಂಟೆಗಳ ನಿದ್ರೆಯಿಂದ ಮನಸ್ಸಿಗೆ ಮಸುಕು ಕವಿದಂತಾಗುತ್ತದೆ ಮತ್ತು ಏಕಾಗ್ರತೆ ಕಡಿಮೆಯಾಗುತ್ತದೆ. ರಾತ್ರಿ ಕನಿಷ್ಠ 7-8 ಗಂಟೆಗಳ ಒಳ್ಳೆಯ ನಿದ್ರೆಯ ಅಗತ್ಯವಿದೆ.
►ಆಹಾರ
ನಿಮ್ಮ ಶರೀರಕ್ಕೆ ಸಾಕಷ್ಟು ವಿಟಾಮಿನ್ ಬಿ12 ದೊರೆಯುತ್ತಿದೆಯೇ? ಇಲ್ಲದಿದ್ದರೆ ವಿಟಾಮಿನ್ ಬಿ12 ಸಮೃದ್ಧವಾಗಿರುವ ಆಹಾರಗಳು ನಿಮ್ಮ ಊಟದ ಭಾಗವಾಗಿರಲಿ. ಈ ವಿಟಾಮಿನ್ ಮಿದುಳಿನ ಕಾರ್ಯ ನಿರ್ವಹಣೆಯನ್ನು ಬೆಂಬಲಿಸುತ್ತದೆ ಮತ್ತು ಅದರ ಕೊರತೆಯು ಬ್ರೇಯ್ನಿ ಫಾಗ್ಗೆ ಕಾರಣವಾಗುತ್ತದೆ. ಅಲ್ಲದೆ ಅತಿಯಾದ ಸಕ್ಕರೆ,ಮದ್ಯ,ಸಂಸ್ಕರಿತ ಕಾರ್ಬೊಹೈಡ್ರೇಟ್ಗಳು ಮತ್ತು ಕೆಫೀನ್ ಸೇವನೆಯೂ ಮಿದುಳಿನ ಕಾರ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತವೆ.
►ಹಾರ್ಮೋನ್ ಬದಲಾವಣೆಗಳು
ಹಾರ್ಮೋನ್ ಬದಲಾವಣೆಗಳೂ ಬ್ರೇಯ್ನ ಫಾಗ್ನ್ನುಂಟು ಮಾಡುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳು ಮಿದುಳಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮವನ್ನು ಬೀರುತ್ತವೆ.
►ಒತ್ತಡ
ದೀರ್ಘಕಾಲದ ಮಾನಸಿಕ ಒತ್ತಡವು ವ್ಯಕ್ತಿಯು ಯಾವುದೇ ವಿಷಯದಲ್ಲಿ ಚಿಂತನೆ ಮಾಡುವುದನ್ನು ಕಠಿಣಗೊಳಿಸುತ್ತದೆ, ಏಕೆಂದರೆ ಅದು ಮಿದುಳಿನ ಮೇಲೆ ಬಹಳಷ್ಟು ಒತ್ತಡವನ್ನುಂಟು ಮಾಡುತ್ತದೆ ಮತ್ತು ಅದು ದಣಿಯುವಂತೆ ಮಾಡುತ್ತದೆ. ಇದರಿಂದ ಯೋಚನಾ ಶಕ್ತಿ, ತಾರ್ಕಿಕತೆ ಮತ್ತು ಏಕಾಗ್ರತೆ ಕಡಿಮೆಯಾಗುತ್ತವೆ.
►ಔಷಧಿಗಳು
ಔಷಧಿಗಳು ಸಹ ಮಿದುಳಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ವನ್ನುಂಟು ಮಾಡುತ್ತವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುವ ಕಿಮೋಥೆರಪಿ ಔಷಧಿಗಳ ವ್ಯಕ್ತಿಯ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಕುಂದಿಸುತ್ತವೆ. ನಿದ್ರೆಯ ಮಾತ್ರೆಗಳು ಮತ್ತು ಖಿನ್ನತೆ ನಿವಾರಕ ಔಷಧಿಗಳು ಮರೆಗುಳಿತನವನ್ನು ಹೆಚ್ಚಿಸಿ ಮಾನಸಿಕ ಗೊಂದಲವನ್ನುಂಟು ಮಾಡುತ್ತವೆ.
►ಕಾಯಿಲೆಗಳು
ಮಾಂಸಖಂಡಗಳಲ್ಲಿ ಸಹಿಸಲಸಾಧ್ಯ ನೋವನ್ನುಂಟು ಮಾಡುವ ಫೈಬ್ರೊಮ್ಯಾಲ್ಗಿಯಾ, ದೀರ್ಘಕಾಲೀನ ಬಳಲಿಕೆ, ರಕ್ತಹೀನತೆ, ಖಿನ್ನತೆ, ಮಧುಮೇಹ, ಮೈಗ್ರೇನ್, ಅಲ್ಝೀಮರ್ಸ್ ಕಾಯಿಲೆ, ಹೈಪೊಥೈರಾಯ್ಡಿಸಂ, ನಿರ್ಜಲೀಕರಣ ಹಾಗೂ ಸಂಧಿವಾತದಂತಹ ಸ್ವ ಪ್ರತಿರಕ್ಷಿತ ರೋಗಗಳು ಬ್ರೇಯ್ನಿ ಫಾಗ್ನ್ನುಂಟು ಮಾಡುತ್ತವೆ.
ಬ್ರೇಯ್ನ ಫಾಗ್ ಎಷ್ಟು ಸಮಯವಿರುತ್ತದೆ?
ಸಾಮಾನ್ಯವಾಗಿ ಈ ಸ್ಥಿತಿ ಕೆಲವು ಗಂಟೆಗಳಿಂದ ಹಿಡಿದು ಕೆಲವು ದಿನಗಳು ಅಥವಾ ವಾರಗಳವರೆಗೂ ಕಾಡಿಸುತ್ತದೆ. ಈ ಅವಧಿಯು ನಿಮ್ಮ ನಿಯಂತ್ರಣದಲ್ಲಿರುವ ಅಂಶಗಳು, ವಿಶೇಷವಾಗಿ ಜೀವನಶೈಲಿ ಅಂಶಗಳನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ನಿಮ್ಮನ್ನು ಕಾಡುತ್ತಿರುವ ಬ್ರೇಯ್ನಿ ಫಾಗ್ ಔಷಧಿಗಳಿಂದ ಉಂಟಾಗಿದ್ದರೆ ಅವುಗಳ ಸೇವನೆಯನ್ನು ನಿಲ್ಲಿಸಿದ ಬಳಿಕ ಈ ಸಮಸ್ಯೆಯೂ ದೂರವಾಗುತ್ತದೆ.
ಬ್ರೇಯ್ನ ಫಾಗ್ನ ಲಕ್ಷಣಗಳು
ತಲೆನೋವು, ಶಕ್ತಿ ಕುಂದಿದ ಅಥವಾ ದಣಿವಿನ ಅನುಭವ, ಏಕಾಗ್ರತೆಗೆ ತೊಂದರೆ, ಕೆರಳುವಿಕೆ, ಮರೆಗುಳಿತನ, ಉದ್ವೇಗ, ನಿರಾಶೆಯ ಭಾವನೆ, ಮಾನಸಿಕ ಗೊಂದಲ, ನಿದ್ರೆ ಬಾರದಿರುವುದು ಇವೆಲ್ಲ ಈ ಸಮಸ್ಯೆಯ ಲಕ್ಷಣಗಳಲ್ಲಿ ಸೇರಿವೆ.
ಬ್ರೇಯ್ನ ಫಾಗ್ನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.