ಮಂಡ್ಯ : ಸ್ನೇಹಿತನನ್ನು ಕೊಂದು ಆತನ ರುಂಡದೊಂದಿಗೆ ಠಾಣೆಗೆ ಆಗಮಿಸಿದ ಯುವಕ

ಮಂಡ್ಯ, ಸೆ. 29: ಯುವಕನೊಬ್ಬ ಸ್ನೇಹಿತನನ್ನು ಕೊಂದು ಆತನ ರುಂಡದೊಂದಿಗೆ ಮಂಡ್ಯ ಜಿಲ್ಲೆಯ ಮಲವಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಘಟನೆ ಶನಿವಾರ ನಡೆದಿದೆ. ಆತ ಠಾಣೆವರೆಗೆ ತನ್ನ ಮೋಟಾರ್ ಬೈಕಿನಲ್ಲಿ ಬಂದಿದ್ದು ಆತನನ್ನು ನೋಡಿ ಪೊಲೀಸರು ಅರೆ ಕ್ಷಣ ಅವಾಕ್ಕಾದರೂ ಸಾವರಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಈ ಯುವಕನನ್ನು ಪಶುಪತಿನಾಥ್ (28) ಎಂದು ಗುರುತಿಸಲಾಗಿದ್ದು, ಆತ ತನ್ನೊಂದಿಗೆ ತಂದಿದ್ದ ರುಂಡ ಗಿರೀಶ್ (28) ಎಂಬಾತನದ್ದಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿ ಮತ್ತು ಸಂತ್ರಸ್ತ ಇಬ್ಬರೂ ಗೆಳೆಯರೆಂದು ತಿಳಿದು ಬಂದಿದೆ. ಗಿರೀಶ್ ತನ್ನ ತಾಯಿಯ ಬಗ್ಗೆ ಸಲ್ಲದ್ದನ್ನು ಹೇಳಿದ್ದರಿಂದ ಸಿಟ್ಟುಗೊಂಡು ಈ ಕೃತ್ಯವೆಸಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಇಂತಹ ಘಟನೆ ರಾಜ್ಯದಲ್ಲಿ ಈ ತಿಂಗಳು ನಡೆಯುತ್ತಿರುವುದು ಇದು ಮೂರನೇ ಬಾರಿ. ಕೆಲವೇ ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ರುಂಡದೊಂದಿಗೆ ಠಾಣೆಗೆ ಆಗಮಿಸಿದ್ದ.
ಇದಕ್ಕೂ ಮೊದಲು ನಡೆದ ಇನ್ನೊಂದು ಘಟನೆಯಲ್ಲಿ ಚಿಕ್ಕಮಗಳೂರಿನ ಅಜ್ಜಂಪುರ ಠಾಣೆಗೆ ವ್ಯಕ್ತಿಯೊಬ್ಬ ಒಂದು ಕೈಯ್ಯಲ್ಲಿ ತನ್ನ ಪತ್ನಿಯ ರುಂಡ ಹಾಗೂ ಇನ್ನೊಂದು ಕೈಯ್ಯಲ್ಲಿ ಕತ್ತಿ ಹಿಡಿದುಕೊಂಡು ಬಂದಿದ್ದ. ಪತ್ನಿ ಬೇರೊಬ್ಬನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದಿಂದ ಬೇಸತ್ತು ಆತ ಈ ಕೃತ್ಯವೆಸಗಿದ್ದನೆಂದು ತಿಳಿದು ಬಂದಿದೆ.







