ಕರ್ತವ್ಯ ಲೋಪ ಎಸಗಿದ ಆರೋಪ: ವಿಟ್ಲ ಠಾಣೆಯ ಬೀಟ್ ಪೊಲೀಸ್ ಸಿಬ್ಬಂದಿ ಅಮಾನತು
ವೆಲಂಕಣಿ ಮಾತೆಯ ಗುಡಿ ಧ್ವಂಸ ಪ್ರಕರಣ

ಬಂಟ್ವಾಳ, ಸೆ. 29: ಕೊಳ್ನಾಡು ಗ್ರಾಮದ ಕುಳಾಲು ಕುಂಟ್ರಕಳ ಎಂಬಲ್ಲಿ ವೆಲಂಕನಿ ಮಾತೆಯ ಗುಡಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಬೀಟ್ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ, ಕೊಳ್ನಾಡು ಗ್ರಾಮದ ಬೀಟ್ ಪೊಲೀಸ್ ಅಶೋಕ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಸೆ. 27ರಂದು ರಾತ್ರಿ ದುಷ್ಕರ್ಮಿಗಳ ತಂಡವೊಂದು ವೆಲಂಕಣಿ ಮಾತೆಯ ಗುಡಿಯನ್ನು ಧ್ವಂಸ ಮಾಡಿ, ಕೇಸರಿ ಧ್ವಜ ಇಡಲಾಗಿತ್ತು ಎಂಬ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ್ದರು. ಕೊಳ್ನಾಡು ಗ್ರಾಮದಲ್ಲಿ ಬೀಟ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್ ಅವರು ಈ ಜಾಗದ ವಿವಾದದ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.





