ಆರ್.ಅಶೋಕ್ ತಲೆದಂಡಕ್ಕೆ ಹೆಚ್ಚಿದ ಒತ್ತಡ : ಬೆಂಗಳೂರು ಬಿಜೆಪಿ ಉಸ್ತುವಾರಿ ಬದಲಾವಣೆ ಸಾಧ್ಯತೆ

ಬೆಂಗಳೂರು, ಸೆ. 29: ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರು ಉಸ್ತುವಾರಿ ಆರ್.ಅಶೋಕ್ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅವರ ಬದಲಾವಣೆಗೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿದ್ದು ವರಿಷ್ಠರಿಗೆ ದೂರು ನೀಡಲು ಪಕ್ಷದ ಕೆಲ ಮುಖಂಡರು ನಿರ್ಧರಿಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊಸದಿಲ್ಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದ್ದು, ವರಿಷ್ಠರ ಸೂಚನೆಯಂತೆ ಬಿಎಸ್‌ವೈ ನಾಳೆ(ಸೆ.30) ದಿಲ್ಲಿ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಬಿಬಿಎಂಪಿಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಆಪರೇಷನ್ ಕಾರ್ಪೋರೇಟರ್ ನಡೆಸಲು ಹೋಗಿ ಕೈ ಸುಟ್ಟುಕೊಂಡಿದ್ದು ಅಲ್ಲದೆ, ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಆರ್.ಅಶೋಕ್ ವಿರುದ್ಧ ಸ್ಥಳೀಯ ಮುಖಂಡರು ಸೇರಿದಂತೆ ವರಿಷ್ಠರು ಸಿಟ್ಟಾಗಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು ಬಿಜೆಪಿ ಉಸ್ತುವಾರಿಯನ್ನಾಗಿ ಆರ್.ಅಶೋಕ್ ಬದಲಿಗೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರನ್ನು ನಿಯೋಜಿಸುವ ಸಾಧ್ಯತೆಗಳಿವೆ.
ಬಿಬಿಎಂಪಿಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯುವಲ್ಲಿ ಮಾತ್ರ ಸಫಲವಾಗಿಲ್ಲ.
ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿಯೂ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರನ್ನು ಸೆಳೆದುಕೊಳ್ಳಲು ಹೋಗಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಆ ಸ್ಥಾನಗಳಿಗೆ ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದರು.
ಅನಂತರ ಕಾಂಗ್ರೆಸಿನ ಗಂಗಾಂಬಿಕೆ ಮೇಯರ್, ಜೆಡಿಎಸ್‌ನ ರಮೀಳಾ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಈ ಸಂಬಂಧ ಪಕ್ಷದ ಮುಖಂಡರು ಹೈಕಮಾಂಡ್ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಆರ್.ಅಶೋಕ್ ತಲೆದಂಡಕ್ಕೆ ವರಿಷ್ಠರು ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.







