ಭಿಂದ್ರನವಾಲೆ ಚಿತ್ರವನ್ನು ತೆಗೆಯಲು ಅಧಿಕಾರಿಗಳ ನಕಾರ: ಕರ್ನಾಲ್ ಗುರುದ್ವಾರಾ ಭೇಟಿ ರದ್ದುಗೊಳಿಸಿದ ಖಟ್ಟರ್
ಕರ್ನಾಲ್(ಹರ್ಯಾಣ),ಸೆ.29: ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಶುಕ್ರವಾರ ಇಲ್ಲಿಯ ಡಚಾರ್ ಗ್ರಾಮದ ಗುರುದ್ವಾರಾಕ್ಕೆ ತನ್ನ ನಿಗದಿತ ಭೇಟಿಯನ್ನು ರದ್ದುಗೊಳಿಸಿದ್ದು ವಿವಾದವನ್ನು ಸೃಷ್ಟಿಸಿದ್ದು,ಇದನ್ನು ವಿರೋಧಿಸಿ ಗ್ರಾಮದ ಸಿಖ್ ಸಮುದಾಯದ ಜನರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಶನಿವಾರ ಸ್ಪಷ್ಟನೆಯನ್ನು ನೀಡಿರುವ ಖಟ್ಟರ್,ಗುರುದ್ವಾರಾದಲ್ಲಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಜರ್ನೈಲ್‌ಸಿಂಗ್ ಭಿಂದ್ರನವಾಲೆಯ ಚಿತ್ರವನ್ನು ತೆಗೆಯಲು ಅಲ್ಲಿಯ ಅಧಿಕಾರಿಗಳು ನಿರಾಕರಿಸಿದ್ದರಿಂದ ತಾನು ಭೇಟಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೆ ಎಂದು ತಿಳಿಸಿದರು.
ಖಟ್ಟರ್ ಅವರು ಶುಕ್ರವಾರ ತನ್ನ ಮತಕ್ಷೇತ್ರವಾದ ಕರ್ನಾಲ್‌ನಲ್ಲಿಯ 13 ತೀರ್ಥಕ್ಷೇತ್ರಗಳಿಗೆ ಒಂದು ದಿನದ ಯಾತ್ರೆಯನ್ನು ಕೈಗೊಂಡಿದ್ದರು. ಅವರ ಕಾರ್ಯಕ್ರಮದಲ್ಲಿ ಡಚಾರ್ ಗ್ರಾಮದ ಗುರುದ್ವಾರಾಕ್ಕೆ ಭೇಟಿಯೂ ಸೇರಿತ್ತು.
ಪ್ರತಿಭಟನಾಕಾರರು ಅಗ್ನಿಶಾಮಕ ವಾಹನವೊಂದಕ್ಕೆ ಹಾನಿಯನ್ನುಂಟು ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಖಟ್ಟರ್,ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಉತ್ತರಿಸಿದರು.
ಖಲಿಸ್ತಾನ್ ಸಿದ್ಧಾಂತಿ ಭಿಂದ್ರನವಾಲೆ ಚಿತ್ರವನ್ನು ತೆಗೆಯುವಂತೆ ನಮಗೆ ಶುಕ್ರವಾರ ಬೆಳಿಗ್ಗೆ ಸೂಚಿಸಲಾಗಿತ್ತು, ಆದರೆ ಹಾಗೆ ಮಾಡುವುದರಿಂದ ಗ್ರಾಮದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು ಎಂದು ನಾವು ತಿಳಿಸಿದ್ದೆವು. ಬಳಿಕ ಮುಖ್ಯಮಂತ್ರಿಗಳ ಭೇಟಿಯನ್ನು ರದ್ದುಗೊಳಿಸಿದ್ದ ಬಗ್ಗೆ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುದ್ವಾರಾಕ್ಕೆ ಸಮೀಪದ ದೇವಸ್ಥಾನವೊಂದಕ್ಕೆ ಅವರು ಭೇಟಿ ನೀಡಿದ್ದು,ಇಲ್ಲಿಗೆ ಭೇಟಿಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು ಎಂದು ಗುರುದ್ವಾರಾ ಸಮಿತಿಯ ಸದಸ್ಯರೋರ್ವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದರು.







