ಕಾರ್ಬೊಹೈಡ್ರೇಟ್‌ಗಳ ಅತಿಯಾದ ಸೇವನೆ ಬೇಗ ಸಾವನ್ನು ತರುತ್ತದೆ: ಅಧ್ಯಯನ

ಕೋಲ್ಕತಾ,ಸೆ.29: ಹೆಚ್ಚಿನ ಕೊಬ್ಬನ್ನು ಸೇವಿಸುವವರಿಗೆ ಹೋಲಿಸಿದರೆ ಅತಿಯಾದ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವವರು ಸಣ್ಣ ವಯಸ್ಸಿನಲ್ಲಿಯೇ ಸಾಯುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಎಂದು ಪ್ರಾಸ್ಪೆಕ್ಟಿವ್ ಅರ್ಬನ್ ರೂರಲ್ ಎಪಿಡೆಮಿಯಾಲಜಿ(ಪ್ಯೂರ್)ಯು ಇತ್ತೀಚಿಗೆ ಕೈಗೊಂಡ ಅಧ್ಯಯನವೊಂದು ಹೇಳಿದೆ.
ಕಡಿಮೆ ಕೊಬ್ಬು ಹೊಂದಿರುವ ಆಹಾರಗಳ ಸೇವನೆಯು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ತಗ್ಗಿಸುತ್ತದೆ ಎಂಬ ಹಳೆಯ ನಂಬಿಕೆಯನ್ನು ಅಧ್ಯಯನವು ತಳ್ಳಿಹಾಕಿದೆ.
ಅತ್ಯುತ್ತಮ ಗುಣಮಟ್ಟದ ಆಹಾರವು ಕಾರ್ಬೊಹೈಡ್ರೇಟ್‌ಗಳಿಂದ ಶೇ.54ರಷ್ಟು,ಕೊಬ್ಬುಗಳಿಂದ ಶೇ.28ರಷ್ಟು ಮತ್ತು ಪ್ರೋಟಿನ್‌ನಿಂದ ಶೇ.18ರಷ್ಟು ಶಕ್ತಿಯನ್ನು ಒಳಗೊಂಡಿರುತ್ತದೆ. ಇಂತಹ ಆಹಾರವನ್ನು ಸೇವಿಸುವ ವ್ಯಕ್ತಿಗಳಲ್ಲಿ ಸಾವಿನ ಅಪಾಯವು ಕಡಿಮೆ ಗುಣಮಟ್ಟದ ಆಹಾರವನ್ನು ಸೇವಿಸುವವರಿಗೆ ಹೋಲಿಸಿದರೆ ಶೇ.25ರಷ್ಟು ಕಡಿಮೆಯಾಗಿರುತ್ತದೆ ಎಂದು ಅದು ತಿಳಿಸಿದೆ.
ಹೃದಯ ರಕ್ತನಾಳ ರೋಗವು ವಿಶ್ವವ್ಯಾಪಿಯಾಗಿದ್ದು, ಈ ಪೈಕಿ ಶೇ.80ರಷ್ಟು ಹೃದಯ ರೋಗಗಳ ಪ್ರಕರಣಗಳು ಕಡಿಮೆ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಿಂದ ವರದಿಯಾಗುತ್ತಿವೆ.
ಪ್ಯೂರ್ ವರದಿಗೆ ಸಹಮತವನ್ನು ವ್ಯಕ್ತಪಡಿಸಿರುವ ಹಿರಿಯ ಹೃದ್ರೋಗ ತಜ್ಞರು, ಹೃದಯವನ್ನು ಆರೋಗ್ಯಯುತವಾಗಿರಿಸಲು ಅಕ್ಕಿ,ರೊಟ್ಟಿ ಮತ್ತು ಬ್ರೆಡ್‌ಗಳ ಸೇವನೆಯನ್ನು ತಗ್ಗಿಸುವ ಮೂಲಕ ಮಧುಮೇಹ,ಬೊಜ್ಜು,ಮತ್ತು ಅಧಿಕ ರಕ್ತದೊತ್ತಡಗಳಂತಹ ಜೀವನಶೈಲಿ ಕಾಯಿಲೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಮತೋಲಿತ ಆಹಾರವು ಶೇ.50ಕ್ಕಿಂತ ಕಡಿಮೆ ಕಾರ್ಬೊಹೈಡ್ರೇಟ್‌ಗಳು ಮತ್ತು ಶೇ.30-35ರಷ್ಟು ಕೊಬ್ಬನ್ನು ಒಳಗೊಂಡಿರಬೇಕು. ಕಾರ್ಬೊಹೈಡ್ರೇಟ್‌ಗಳ, ವಿಶೇಷವಾಗಿ ಸಂಸ್ಕರಿತ ಆಹಾರಗಳ ಸೇವನೆಯನ್ನು ಸೀಮಿತಗೊಳಿಸಿ ಆರೋಗ್ಯಕರ ಕೊಬ್ಬಿನ ಸೇವನೆಯು ಅತ್ಯಂತ ಮುಖ್ಯವಾಗಿದೆ ಎಂದು ಶನಿವಾರ ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಲ್ಲಿಯ ಅಪೋಲೊ ಗ್ಲೆನೇಗ್ಲಸ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಸುವ್ರೊ ಬ್ಯಾನರ್ಜಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.







