ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು
ಚೆಸ್ಕಾಂ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಮಡಿಕೇರಿ, ಸೆ.29 :ಮೋಟಾರ್ ಗೆ ಅಳವಡಿಸಿದ್ದ ತುಂಡಾದ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.
ಅಮ್ಮತ್ತಿ ಕಣ್ಣಂಗಾಲದ ಇ.ಸಿ.ಕಾಳಪ್ಪ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಶಶಿಕುಮಾರ್ ಹಾಗೂ ಭಾಗ್ಯ ದಂಪತಿಗಳ ತೃತೀಯ ಪುತ್ರ ಕಾಶಿಯಪ್ಪ ಮೃತ ಬಾಲಕ.
ಗ್ರಾ.ಪಂ ಮೂಲಕ ಗ್ರಾಮದ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಮೋಟಾರ್ ನ ವಿದ್ಯುತ್ ತಂತಿ ಮಳೆಯ ಕಾರಣ ತುಂಡಾಗಿ ರಸ್ತೆಯ ಮೇಲೆ ಬಿದ್ದಿತ್ತು. ಶನಿವಾರ ಬೆಳಗ್ಗೆ ಅಂಗನವಾಡಿಗೆ ತೆರಳುತ್ತಿದ್ದ ಬಾಲಕ ಕಾಶಿಯಪ್ಪನಿಗೆ ತಂತಿ ತಗುಲಿ ವಿದ್ಯುದಾಘಾತವಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಶಶಿಕುಮಾರ್ ನೀಡಿದ ದೂರಿನ ಮೇರೆ, ವೀರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಅಮ್ಮತ್ತಿ ವಿಭಾಗದ ಕಿರಿಯ ಅಭಿಯಂತರರ ಮೇಲೆ ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಮೇಲೆ ಕರ್ತವ್ಯ ನಿರ್ಲಕ್ಷ್ಯ ದೂರು ದಾಖಲಿಸಿಕೊಳ್ಳಲಾಗಿದೆ.
ಗ್ರಾಮಸ್ಥರ ಪ್ರತಿಭಟನೆ
ಬಾಲಕನ ಸಾವಿಗೆ ಚೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಗ್ರಾಮಸ್ಥರು ಕಛೇರಿಯ ಎದುರು ಪ್ರತಿಭಟನೆ ನಡೆಸಿ, ಬಾಲಕನ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವಂತೆ ಅಗ್ರಹಿಸಿದರು.
ಕಾನೂನು ರೀತಿಯಲ್ಲಿ ತನಿಖೆ ಮಾಡಿದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ನಾಗಪ್ಪ ತಿಳಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖ ಎಜಾಜ್ ಅಹಮ್ಮದ್, ಮುಕ್ತಾರ್ ಅಹಮ್ಮದ್, ಖಲೀಲ್, ಎಸ್.ಡಿಪಿ.ಐ ಮುಖಂಡ ಸಬೀತ್, ರಫ್ಸರ್, ಇಮ್ತಿಯಾಝ್ ಮತ್ತಿತರರು ಪಾಲ್ಗೊಂಡಿದ್ದರು.







