ಮಾದಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ: ಎಚ್.ಆಂಜನೇಯ, ಎಲ್.ಹನುಮಂತಯ್ಯ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು, ಸೆ. 29: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸಂಪುಟ ವಿಸ್ತರಣೆ ವೇಳೆ ಮಾದಿಗ(ಎಡಗೈ) ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಭಯ ನಾಯಕರು, 70 ವರ್ಷಗಳಿಂದ ಎಡಗೈ ಸಮುದಾಯದವರು ಇಲ್ಲದ ಸಚಿವ ಸಂಪುಟವೇ ಇರಲಿಲ್ಲ. ಆದರೆ, ಮೈತ್ರಿ ಸರಕಾರದ ಸಂಪುಟದಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ನಿಜಕ್ಕೂ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಮಾದಿಗ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಈಗಾಗಲೇ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿದ್ದು, ಕೋಲಾರ ಜಿಲ್ಲೆ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್, ಪರಿಷತ್ ಸದಸ್ಯರಾದ ಧರ್ಮಸೇನ, ಆರ್.ಬಿ.ತಿಮ್ಮಾಪುರ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಸಚವ ಸಂಪುಟ ವಿಸ್ತರಣೆ ವೇಳೆ ಮಾದಿಗ(ಎಡಗೈ) ಸಮುದಾಯಕ್ಕೆ ಅವಕಾಶ ಸಿಗುವ ವಿಶ್ವಾಸವಿದೆ. ಈಗಾಗಲೇ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ಹೈಕಮಾಂಡ್‌ಗೂ ಮನವಿ ಮಾಡಿದ್ದೇವೆ. ಕೆಪಿಸಿಸಿ ನಾಯಕರಿಗೂ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ವರ್ಗಿಕರಣ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚುನಾವಣೆ ಹಿನ್ನೆಲೆಯಲ್ಲಿ ಸರಕಾರ ಹಿಂದೆ ಸರಿದಿತ್ತು. ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ಆಗ್ರಹಿಸಿದ್ದೇವೆ ಎಂದ ಅವರು, ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಂಬಂಧ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರಕಾರ ‘ಆದಿ ಜಾಂಬವ ಅಭಿವೃದ್ಧಿ ನಿಗಮ’ವನ್ನು ಅಕ್ಟೋಬರ್ 12ರಂದು ಉದ್ಘಾಟಿಸಲು ತೀರ್ಮಾನಿಸಿದ್ದು, ಈ ಕುರಿತಂತೆ ಅ.4ಕ್ಕೆ ಸಮುದಾಯದ ಮುಖಂಡ ಪೂರ್ವಭಾವಿ ಸಭೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ನಿಗಮದ ಉದ್ಘಾಟನಾ ಸಮಾರಂಭವನ್ನು ಅರಮನೆ ಮೈದಾನದಲ್ಲಿ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಮುಖಂಡರಾದ ಶಂಕರ್, ವೆಂಕಟೇಶ್, ಆನಂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ನನಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾನೂ ಅವರ ಪರ ಕೆಲಸ ಮಾಡುತ್ತೇವೆ. ಆದರೆ, ನಾನು ಕೆಪಿಸಿಸಿ ಯುವ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಹೀಗಾಗಿ ಪಕ್ಷ ನನಗೆ ಸೂಕ್ತ ಸ್ಥಾನಮಾನ ನೀಡುವ ವಿಶ್ವಾಸವಿದೆ’
-ಎಚ್.ಆಂಜನೇಯ ಮಾಜಿ ಸಚಿವ







