ಆಳ್ವಾಸ್ ಚಿತ್ರಸಿರಿ 2018: ಚಿತ್ರಕಲಾವಿದರಿಗೆ ಆಹ್ವಾನ
ಮೂಡುಬಿದಿರೆ, ಸೆ. 29: ನಾಡಿನ ಶ್ರೇಷ್ಠ ಕಲಾವಿದರನ್ನು ಒಗ್ಗೂಡಿಸುವ ಸಲುವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 12 ವರ್ಷಗಳಿಂದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರವನ್ನು ಆಯೋಜಿಸುತ್ತಿದೆ. ಈ ವರ್ಷದ ಶಿಬಿರವನ್ನು ನ.10ರಿಂದ13ರವರೆಗೆ ಆಯೋಜಿಸಲಾಗುವುದು.
'ಆಳ್ವಾಸ್ ಚಿತ್ರಸಿರಿ 2018'ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ಈ ರಾಜ್ಯಮಟ್ಟದ ಚಿತ್ರಕಲಾಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 25 ಹಿರಿಯ, ಕಿರಿಯ ಸಮಕಾಲೀನ ಕಲಾವಿದರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಭಾಗವಹಿಸುವ ಕಲಾವಿದರು 3x3 ಅಳತೆಯ ಎರಡು ಕಲಾಕೃತಿಗಳನ್ನು ರಚಿಸಬೇಕು. ಆಹ್ವಾನಿತ ಕಲಾವಿದರಿಗೆ ಊಟ, ವಸತಿ, ಪ್ರಯಾಣ ಭತ್ಯೆಗಳೊಂದಿಗೆ 8000 ರೂ. ಗೌರವಧನವನ್ನು ನೀಡಲಾಗುವುದು. ಇಲ್ಲಿ ಮೂರ್ತಗೊಳ್ಳುವ ಕಲಾಕೃತಿಗಳನ್ನು ನ.16ರಿಂದ18ರ ತನಕ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಭಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
ಆಸಕ್ತ ಚಿತ್ರಕಲಾವಿದರು ತಮ್ಮ ಇತ್ತೀಚಿನ 2-3 ಕಲಾಕೃತಿಗಳ ಭಾವಚಿತ್ರಗಳ ಜೊತೆಗೆತಮ್ಮ ಸಾಧನೆಯವಿವರಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ-574227 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 08258-261229 ಎಂದು ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





