ಹನೂರು : ಭಾರಿ ಮಳೆಗೆ ಗೋಡೆ ಕುಸಿದು 1 ಹಸು, 3 ಕುರಿ ಸಾವು

ಹನೂರು,ಸೆ.29: ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ, ಕಣ್ಣೂರು ಗ್ರಾಮದಲ್ಲಿ ಗೋಡೆ ಕುಸಿದು 1 ಹಸು, 3 ಕುರಿ ಸಾವನ್ನಪ್ಪಿದೆ.
ಶುಕ್ರವಾರ ರಾತ್ರಿಯಾದ್ಯಂತ ಗುಡುಗು ಸಹಿತ ಮಳೆಯಾಯಿತು. ಪರಿಣಾಮ ಕಣ್ಣೂರು ಗ್ರಾಮದ ನಂಜಯ್ಯ ಎಂಬವರಿಗೆ ಸೇರಿದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, 1 ಹಸು ಹಾಗೂ 3 ಕುರಿಗಳು ಸಾವನ್ನಪ್ಪಿದೆ. ಚಿಕ್ಕಹೊಂಗಯ್ಯ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಅಲ್ಲದೇ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಹಾಗೂ ಕಾಲನಿಯ ರಸ್ತೆಯಲ್ಲಿ ನೀರು ಸಂಗ್ರಹವಾದ್ದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು. ಶನಿವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಠಾಣೆಯ ಸಿಬ್ಬಂದಿಗಳು ಸಂಗ್ರಹಗೊಂಡಿದ್ದ ನೀರನ್ನು ತೆರವುಗೊಳಿಸಿದರು.
ಜಿಪಂ ಸದಸ್ಯೆ, ತಹಸೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ಜಿಪಂ ಸದಸ್ಯೆ ಡಿ.ಲೇಖಾ ರವಿಕುಮಾರ್ ಹಾಗೂ ತಹಸೀಲ್ದಾರ್ ಶಿವರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಲೆಕ್ಕಾಧಿಕಾರಿಂದ ವರದಿ ನೀಡುವಂತೆ ತಿಳಿಸಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.





