ಅಪೌಷ್ಟಿಕತೆ ನಿವಾರಣೆಗೆ ಶೀಘ್ರದಲ್ಲೇ ‘ಪೌಷ್ಟಿಕ ಅಭಿಯಾನ’ : ಸಚಿವೆ ಜಯಮಾಲಾ
ಕೋಲಾರ,ಸೆ.29: ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡಲು ಶೀಘ್ರದಲ್ಲೇ ‘ಪೌಷ್ಟಿಕ ಅಭಿಯಾನ’ ಹಮ್ಮಿಕೊಳ್ಳಲು ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 0.3ಕ್ಕೆ ಇಳಿಕೆಯಾಗಿದೆ. ರಕ್ತ ಹೀನತೆ ಮತ್ತು ಅಪೌಷ್ಟಿಕತೆಯಿಂದ ಶೇ.46ರಷ್ಟು ಬಾಣಂತಿಯರು, ಗರ್ಭಣಿಯರು ಮರಣ ಹೊಂದುತ್ತಿದ್ದಾರೆ ಎಂದು ವಿಷಾದಿಸಿದರು.
ಇದನ್ನು ನಿವಾರಣೆ ಮಾಡಲು ಮಾತೃಪೂರ್ಣ ಯೋಜನೆಯನ್ನು ಅನುಷ್ಠಾನಗೊಳಿಸಿದೆವು. ಇದನ್ನು ಪರಿಣಾಮಕಾರಿ ಅನುಷ್ಟಾನ ಮಾಡಲಾಗಿದೆ. ಗರ್ಭಣಿಯರು ಅಂಗನವಾಡಿಗೆ ಬಂದು ಆಹಾರ ಸೇವನೆ ಮಾಡುತ್ತಿದ್ದಾರೆ. ಆದರೆ ಇದರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಇದಕ್ಕೆ ಪೂರಕವಾಗಿ ‘ಪೌಷ್ಟಿಕ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿ ಕೇಂದ್ರಗಳಿದ್ದು, ಹೊಸದಾಗಿ 250 ಮಾದರಿ ಅಂಗನವಾಡಿ ಕೇಂದ್ರಗಳ ನಿರ್ಮಾಣ, 1,000 ಕೇಂದ್ರಗಳ ಪುನಶ್ಚೇತನ ಹಾಗೂ 100 ಮೊಬೈಲ್ ಅಂಗನವಾಡಿಗಳನ್ನು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ರೈತರು ಆತ್ಮ ಸ್ಥೈರ್ಯದಿಂದ ಜೀವನ ನಡೆಸಬೇಕು. ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ರಾಜ್ಯ ಸರ್ಕಾರ ಸಾಧ್ಯವಾದಷ್ಟು ಮಾಡಿದೆ. ಯಾವುದೇ ಸಮಸ್ಯೆ ಪರಿಹಾರಕ್ಕೆ ಕುರಿತು ಚರ್ಚೆ ನಡೆಸಬೇಕು ಎಂದರು.
‘ಕಲಾವಿದ ಸಹಾಯಧನವನ್ನು ಕೆ2 ತಂತ್ರಾಂಶದ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.ಇನ್ನು ಮುಂದೆ ತಡವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ಸಂಸ್ಕೃತಿ ನೀತಿ ಜಾರಿಗೆ ತರುವ ಬಗ್ಗೆ ಹಲವಾರು ಪ್ರಶ್ನೆಗಳು ವ್ಯಕ್ತವಾಗಿವೆ. ಕಡತವನ್ನು ಪುನರ್ ಪರಿಶೀಲನೆ ಮಾಡಿ ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಶಬರಿಮಲೆ ದೇವಾಲಯಕ್ಕೆ ಹೆಣ್ಣು ಮಕ್ಕಳು ಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ನಾನು ಸ್ವಾಗತಿಸುತ್ತೇನೆ, ಇದಕ್ಕಿಂತ ಹೆಚ್ಚಾಗಿ ಮಾತನಾಡಲಾರೆ ಎಂದು ಸಂತಸ ವ್ಯಕ್ತವಾಗಿದೆ.