ನಾಗರಾಜ್ ಜಮಖಂಡಿ ಯುವ ಪತ್ರಕರ್ತರಿಗೆ ಮಾದರಿ: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

ಬೆಂಗಳೂರು,ಸೆ.29 ಮಾಧ್ಯಮದಲ್ಲಿ ಇಂದು ಕ್ರಿಯಾಶೀಲತೆ ಕೊರತೆ ಕಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಗರಾಜ್ ಜಮಖಂಡಿ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜಕಾರಣ ಎಂದೋ ಕೆಟ್ಟಿದೆ. ಸಮಾಜ ನಮ್ಮಿಂದ ಅಪೇಕ್ಷೆ ಪಡುವುದೇ ಬೇರೆ. ಆದರೆ ನಾವು ನಡೆದುಕೊಳ್ಳುತ್ತಿರುವ ರೀತಿನೀತಿ ಬೇರೆಯಾಗಿ, ಇದರಿಂದ ಸಮಾಜ ಹಾಗೂ ರಾಜಕಾರಣಿಗಳ ನಡುವೆ ದೊಡ್ಡ ಅಂತರ ಮೂಡಿದೆ. ನಾಗರಾಜ್ ಜಮಖಂಡಿ ಅವರು ಸಮಾಜ ಹಾಗೂ ರಾಜಕಾರಣದ ನಡುವೆ ಬೆಸುಗೆ ತರುವ ಕೆಲಸ ಮಾಡುತ್ತಿದ್ದರು. ಇವರು ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಯನ್ನು ಎತ್ತಿ ತೋರಿಸುವ ಕೆಲಸ ಮಾಡಿದ್ದರು. ಇಂದು ನಮ್ಮ ಸಮ್ಮಿಶ್ರ ಸರಕಾರ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧವಿದೆ. ಕೇಂದ್ರ ಸರಕಾರ ಈ ಭಾಗದ ಅಭಿವೃದ್ಧಿಗೆ 371ಜೆ ಕಾನೂನು ತಂದಿದೆ. ಈ ಮೂಲಕ ಉದ್ಯೋಗ, ಇತರೆ ಅಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯ ಸರಕಾರ ಕೂಡ ಸಾಕಷ್ಟು ಹಣ ಮೀಸಲಿಡುವ ಕೆಲಸ ಮಾಡಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದ್ದೇವೆ ಎಂಬ ಭಾವನೆ ಇದ್ದರೆ ಅದನ್ನು ತೆಗೆದುಬಿಡಿ ಎಂದು ಹೇಳಿದರು.
ನಾಗರಾಜ್ ಅವರು ಮಾಧ್ಯಮ ಕ್ಷೇತ್ರಕ್ಕೆ ಮಾದರಿಯಂತೆ ಇದ್ದವರು. ಸಮಾಜಮುಖಿಯಾಗಿ ಕೆಲಸ ಮಾಡಿ, ಅನೇಕ ಪತ್ರಕರ್ತರಿಗೆ ಮಾರ್ಗದರ್ಶಕರು. ಇಂದು ಎಲ್ಲ ಕ್ಷೇತ್ರಗಳು ಕಲುಶಿತವಾಗಿದೆ. ಮಾಧ್ಯಮ ಕಲುಶಿತವಾಗಿದೆ. ಕ್ರಿಯಾಶೀಲತೆ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.





