"ಗಾಂಧಿ ಗ್ರಾಮ" ಪುರಸ್ಕಾರಕ್ಕೆ ಬಂಟ್ವಾಳದ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆ

ಬಂಟ್ವಾಳ, ಸೆ. 29: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್‍ಗಳ ವಾರ್ಷಿಕ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ ಕೊಡುವ 2017-18 ನೆ ಸಾಲಿನ "ಗಾಂಧಿ ಗ್ರಾಮ" ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
2017-18ನೆ ಸಾಲಿನ "ಗಾಂಧಿ ಗ್ರಾಮ" ಪುರಸ್ಕಾರಕ್ಕೆ ಈ ಬಾರಿಯೂ ಬಂಟ್ವಾಳ ತಾಲೂಕಿನ ಕೊಳ್ನಾಡು, ಇರಾ ಮತ್ತು ಬಾಳ್ತಿಲ ಗ್ರಾಮ ಪಂಚಾಯತ್‍ಗಳ ಹೆಸರು ಶಿಫಾರಸ್ಸಾಗಿದ್ದವು. ಆದರೆ, ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಮಾನದಂಡದಂತೆ ಅಂತಿಮವಾಗಿ 150 ಅಂಕಗಳ ಪ್ರಶ್ನಾಂಕಗಳ ಆಧಾರದ ಮೇಲೆ ಬಾಳ್ತಿಲ ಗ್ರಾಮ ಪಂಚಾಯತ್ ಪ್ರಶಸ್ತಿ ಪಡೆದಿಕೊಂಡಿದೆ.
2017-18ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಪೂರ್ಣ ಬಳಕೆ, ಪಂಚಾಯತ್ ವ್ಯಾಪ್ತಿಯಲ್ಲಿ ಶೇ.100 ಶೌಚಾಲಯ ನಿರ್ಮಾಣ, ಅಡುಗೆ ಅನಿಲ ವಿತರಣೆ, ಅನುದಾನದ ಪೂರ್ತಿ ಬಳಕೆ ಹಾಗೂ ಸ್ವಚ್ಚತೆಯಲ್ಲಿ ವಿಶೇಷವಾದ ಸಾಧನೆ ಗೈದ ಹಿನ್ನೆಲೆಯಲ್ಲಿ ಬಾಳ್ತಿಲ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ತಿಳಿಸಿದ್ದಾರೆ.
ಪಂಚಾಯತ್ ಸದಸ್ಯರು, ಅಧಿಕಾರಿಗಳು, ಇತರ ಜನಪ್ರತಿನಿಧಿಗಳ ಹಾಗೂ ಪಂಚಾಯತ್ ನಾಗರಿಕರ ಸಹಕಾರದಿಂದ ಈ ಸಾಧನೆ ಮಾಡಲಾಗಿದ್ದು, ಈ ಪುರಸ್ಕಾರವು ಪಂಚಾಯತ್‍ಗೆ ತಂದ ಗೌರವ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಅ. 2ರ ಗಾಂಧೀ ಜಯಂತಿಯ ದಿನದಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಈ ಪುರಸ್ಕಾರ ಪ್ರಧಾನವಾಗಲಿದೆ.







