ರಾಘವೇಶ್ವರ ಭಾರತಿಶ್ರೀ ಪೀಠ ತ್ಯಜಿಸಲಿ: ಅಖಿಲ ಹವ್ಯಕ ಒಕ್ಕೂಟ ಒತ್ತಾಯ
ಬಾಲಕಿ ಮೇಲೆ ಅತ್ಯಾಚಾರದ ಆರೋಪ

ಬೆಂಗಳೂರು, ಸೆ.29: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿರುವ ಹಿನ್ನೆಲೆ, ಈ ಕೂಡಲೇ ಅವರು ಪೀಠ ತ್ಯಜಿಸಬೇಕು ಎಂದು ಅಖಿಲ ಹವ್ಯಕ ಒಕ್ಕೂಟ ಆಗ್ರಹಿಸಿದೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಸದಸ್ಯ ಶಾಂತರಾಮ ಹೆಗಡೆಕಟ್ಟೆ, ರಾಘವೇಶ್ವರ ಭಾರತಿ, ರಾಮಚಂದ್ರಾಪುರ ಮಠದ ಅಧಿಕಾರ ವಹಿಸಿಕೊಂಡ ಈ ಅವಧಿಯಲ್ಲಿ ಅವರು ಅಪರಾಧ ಪ್ರಕರಣಗಳಲ್ಲಿ ಭಾಗಯಾಗಿರುವುದಲ್ಲದೆ ಆರೋಪಿ ಸ್ಥಾನದಲ್ಲಿದ್ದಾರೆ. ಅವರಿಂದಾಗಿ ಶಂಕರಾಚಾರ್ಯ ಪೀಠಗಳಲ್ಲಿ ಒಂದಾಗಿರುವ ರಾಮಚಂದ್ರಾಪುರ ಮಠಕ್ಕೂ ಅಪವಾದಗಳು ಬರುತ್ತಿದೆ. ಮಠದ ಖ್ಯಾತಿಗೆ ಧಕ್ಕೆ ಬರುತ್ತಿದೆ. ಹೀಗಾಗಿ ರಾಘವೇಶ್ವರ ಸ್ವಾಮೀಜಿ ಅವರು ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿದರು.
ರಾಘವೇಶ್ವರ ಭಾರತೀ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಗೋವಿನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಮಠದ ಹೆಸರಿನಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ತೆರೆದಿರುವ ಗೋ ಸಂರಕ್ಷಕ ಘಟಕಗಳಲ್ಲಿರುವ ಗೋವುಗಳು ಆಹಾರವಿಲ್ಲದೆ ಅಶಕ್ತವಾಗಿವೆ ಎಂದು ದೂರಿದರು.
ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದಲ್ಲದೆ ಭಕ್ತಿಯ ಹೆಸರಿನಲ್ಲಿ ಹವ್ಯಕ ಸಮುದಾಯವನ್ನು ಒಡೆಯುತ್ತಿದ್ದಾರೆ. ಹಿಂದು ಸಂಘಟನೆಗಳ ಹೆಸರನ್ನು ಬಳಸಿಕೊಂಡು ಪ್ರಕರಣಗಳಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಠಿಣ ಶಿಕ್ಷೆ ನೀಡಿ: ರಾಘವೇಶ್ವರ ಭಾರತಿ, ಕೂಡಲೇ ಪೀಠ ತ್ಯಾಗ ಮಾಡಬೇಕು. ಸರಕಾರ ಆರೋಪಿಯ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಬಂಧಿಸಿ ಬೇರೆ ಆರೋಪಿಗಳಂತೆ ವಿಚಾರಣೆಗೊಳಪಡಿಸಬೇಕು. ಸಂತ್ರಸ್ಥೆಯರಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶ್ಯಾಮಪ್ರಸಾದ ಶಾಸ್ತ್ರಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇವರ ಪರವಾಗಿ ವಂಚನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಮತ್ತೊಬ್ಬ ಸದಸ್ಯ ಗಣೇಶ ಭಟ್ ಬಾಯರ್ ಮಾತನಾಡಿ, ಮೊದಲ ಸಂತ್ರಸ್ತೆಯ ಅತ್ಯಾಚಾರ ಆರೋಪದಲ್ಲಿ ಸ್ವಾಮೀಜಿ ಅವರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ, ಈ ಸಂತ್ರಸ್ತೆಯ ಬಾವ ಶ್ಯಾಮಪ್ರಸಾದ ಶಾಸ್ತ್ರಿ ಅವರು ಸ್ವಾಮೀಜಿ ಅವರ ಬೆದರಿಕೆ ಮತ್ತು ಒತ್ತಡಗಳಿಂದಾಗಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ವಿಭಾಗ ಪುತ್ತೂರಿನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ.
ಎರಡನೇ ಸಂತ್ರಸ್ಥೆಯ ವಿಚಾರದಲ್ಲಿ ಸಿಐಡಿ ವಿಭಾಗ ಸ್ವಾಮೀಜಿ ಅವರ ಮೇಲೆ ಸಾಕ್ಷಾಧಾರ ಸಮೇತ ಅತ್ಯಾಚಾರಿ ಆರೋಪ ಪಟ್ಟಿ ಸಲ್ಲಿಸಿದೆ. ಹೀಗೆ ಪ್ರಮುಖ ಪ್ರಕರಣಗಳಲ್ಲಿ ಇವರು ಆರೋಪಿತ ಸ್ಥಾನದಲ್ಲಿದ್ದಾರೆ. ಇದು ಮಠಕ್ಕೆ ಅವಮಾನಕರ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಂಕರಾಚಾರ್ಯ ಪೀಠಗಳಲ್ಲಿನ ಸ್ವಾಮೀಜಿಗಳು ಅನುಸರಿಸಬೇಕಾದ ಕಠಿಣ ಜೀವನ ಕ್ರಮ ಹೇಗಿರಬೇಕೆಂದು ಶಂಕರಾಚಾರ್ಯರು ಮಠಾಮ್ನಾಯ ಗ್ರಂಥದಲ್ಲಿ ತಿಳಿಸಿದ್ದಾರೆ. ಆ ಜೀವನ ಕ್ರಮಕ್ಕೆ ವಿರುದ್ಧವಾಗಿ ರಾಘವೇಶ್ವರ ಶ್ರೀಗಳು ನಡೆದುಕೊಳ್ಳುತ್ತಿದ್ದಾರೆ. ಸನ್ಯಾಸ ಜೀವನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶೃಂಗೇರಿ ಶಾರದಾ ಮಠದ ಭಾರತಿ ತೀರ್ಥ ಸ್ವಾಮೀಜಿ ಅವರ ನೇತೃತ್ವದ ಸನಾತನ ಧರ್ಮ ಸಂವರ್ಧೀನಿ ಸಭೆಯು ರಾಘವೇಶ್ವರ ಸ್ವಾಮೀಜಿ ಅವರನ್ನು ಕೈಬಿಟ್ಟಿದೆ ಎಂದು ತಿಳಿಸಿದರು.







